ಒಮಾನ್: ಸೋಶಿಯಲ್ ಫೋರಂ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2016-08-21 07:43 GMT

ಮಸ್ಕತ್, ಆ.21: ಸೋಶಿಯಲ್ ಫೋರಂ ಕರ್ನಾಟಕ ಚಾಪ್ಟರ್ ಮಸ್ಕತ್ ಒಮಾನ್ ವತಿಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಕ್ಸೂದ್ ಚಂದಾವರ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೂ ರಾಷ್ಟ್ರದ ಆಡಳಿತದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗವಹಿಸುವ ಸ್ವಾತಂತ್ರವಿದೆ. ಆದರೆ ಕೇವಲ ಮತಚಲಾವಣೆಗಾಗಿ ಆತನ ಹಕ್ಕನ್ನು ದುರುಪಯೋಗಪಡಿಸುವ ಅಧಿಕಾರ ಶಾಹಿಗಳ ವಿರುದ್ಧ ಒಂದಾಗಿ ಎದೆತಟ್ಟಿ ನಿಂತು ನ್ಯಾಯ, ನೀತಿಗೆ ತಲೆಬಾಗಿ ರಾಜಕೀಯವಾಗಿ ತಮ್ಮ ಶಕ್ತಿಯನ್ನು ತೋರ್ಪಡಿಸುವುದು ಅನಿವಾರ್ಯವಾಗಿದೆ ಎಂದರು.

ಸೋಶಿಯಲ್ ಫೋರಂ ಕರ್ನಾಟಕ ಚಾಪ್ಟರ್ ಉಪಾಧ್ಯಕ್ಷ ಸೈಯದ್ ಮೊಯ್ದಿನ್ ಸಾಹೇಬ್ ಸಾಸ್ತಾನ್ ಮಾತನಾಡಿ, ನಾವು ಇಂದಲ್ಲ ನಾಳೆ ಹಿಂತಿರುಗಬೇಕಾಗಿರುವುದರಿಂದ ದೇಶದಲ್ಲಿನ ಅಧಿಕಾರ,ಜನಬಲ ಮತ್ತು ಶಕ್ತಿಯನ್ನು ಬಳಸಿ ನಮ್ಮ ಮುಂದಿನ ಪೀಳಿಗೆಯು ಹಸಿವು ಮುಕ್ತ, ಭಯ ಮುಕ್ತ ವಾತಾವರಣದಲ್ಲಿ ಬಾಳುವ ಕನಸಿಗೆ ತಮ್ಮ ಕೊಡುಗೆಯ ಬಗ್ಗೆ ಚಿಂತಿಸಬೇಕಾಗಿದೆ. ಒಮಾನ್‌ನಲ್ಲಿ ‘ಸೋಶಿಯಲ್ ಫೋರಂ’ ಅನಿವಾಸಿ ಭಾರತೀಯರ ಕುಂದುಕೊರತೆಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸುತ್ತಾ ಪ್ರವಾಸಿಗಳಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ಈ ಸಂದರ್ಭ ಜಾತೀಯತೆಯನ್ನು ಹೋಗಲಾಡಿಸಿ ನೈಜ ದೇಶಪ್ರೇಮವನ್ನು ತೋರಿಸುವ ಅನ್ಸಾರ್ ಕಾಟಿಪಳ್ಳ ನಿರ್ದೇಶಿಸಿದ ಫೈಝಲ್ ಮತ್ತು ತಂಡದ ‘ವಿಡಂಬಣೆ’ ಪ್ರದರ್ಶನಗೊಂಡಿತು.

ವೇದಿಕೆಯಲ್ಲಿ ಒಮಾನ್ ಸೋಶಿಯಲ್ ಫೋರಂನ ಕೇಂದ್ರ ಜೊತೆ ಕಾರ್ಯದರ್ಶಿ ನಝೀರ್ ಕೋಡಿಂಬಾಡಿ, ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮುಹಮ್ಮದ್ ಅನ್ವರ್ ಮೂಡುಬಿದಿರೆ, ಪ್ರದೇಶಾಧ್ಯಕ್ಷ ಅಬ್ದುರ್ರಹ್ಮಾನ್ ನಿಟ್ಟೆ ಉಪಸ್ಥಿತರಿದ್ದರು. 

ಅಮಾನ್ ಅಶ್ರಫ್ ಬಾವ ಮತ್ತು ಆಸೀಫ್ ಪಡುಬಿದ್ರೆ ದೇಶಭಕ್ತಿ ಹಾಡುಗಳನ್ನು ಹಾಡಿದರು. ಶಹಾಬುದ್ದೀನ್ ಕಾಟಿಪಳ್ಳ ಸ್ವಾಗತಿಸಿದರು. ಅಬ್ದುರ್ರಹ್ಮಾನ್ ನಿಟ್ಟೆ ವಂದಿಸಿದರು. ಕಾರ್ಯದರ್ಶಿ ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ವರದಿ: ಮಬಾರಕ್ ಕಾರಾಜೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News