ದೇಶದ ಅಭಿವೃದ್ಧಿಗಾಗಿ ಒಂದಾಗೋಣ :ಐಎಸ್‌ಎಫ್ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಆನಂದ್ ಕುಮಾರ್
ಸೌದಿ ಅರೇಬಿಯಾ-ಜಿದ್ದಾ: ಇಂಡಿಯನ್ ಸೊಶಿಯಲ್ ಫಾರಂ ಜಿದ್ದಾ ಕೇಂದ್ರ ಸಮಿತಿ ವತಿಯಿಂದ 70ನೇ ಸ್ವಾತಂತ್ರ್ಯ ಸಂಭ್ರಮವು ಜಿದ್ದಾದ ಇಂಫಾಲ ಗಾರ್ಡನ್ ಸಂಭಾಗಣದಲ್ಲಿ (19-08-2016) ಶುಕ್ರವಾರ ರಾತ್ರಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತೀಯ ರಾಯಭಾರಿ ಕಚೇರಿ ಜಿದ್ದಾ ಇದರ ಪಾಸ್ ಪೋರ್ಟ್ ವಿಭಾಗದ ಮುಖ್ಯಸ್ಥ ಆನಂದ್ ಕುಮಾರ್ ಮಾತನಾಡಿ, ದೇಶದ ಎಲ್ಲಾ ಜಾತಿ, ಧರ್ಮ, ಜನಾಂಗಗಳ ಜನರು ಒಂದಾಗಿ ಹೋರಾಡಿದ್ದರಿಂದಾಗಿ ದೇಶವು ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಯಿತು. ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಇದೇ ರೀತಿಯ ಒಗ್ಗಟ್ಟಿನ ಪ್ರಯತ್ನವನ್ನು ಮುಂದುವರಿಸಬೇಕಾಗಿದೆ. ಹೀಗೆ ದೇಶದ ಎಲ್ಲಾ ಜನರು ಒಂದಾದರೆ ಯಾವುದೇ ಹೊರಗಿನ ಅಥವಾ ಒಳಗಿನ ಶಕ್ತಿಗಳಿಗೆ ದೇಶವನ್ನು ಒಡೆಯುವುದು ಸಾಧ್ಯವಿಲ್ಲ ಎಂದರು.
ಇಂಡಿಯಾ ಫ್ರೆಟರ್ನಿಟಿ ಫಾರಂ ಜಿದ್ದಾ ಇದರ ಮುಖ್ಯಸ್ಥ ಅಬ್ದುಲ್ ಹಕೀಂ ಮಾತನಾಡಿ, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನವನ್ನು ನೆನಪಿಸಿದರು. ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯಗೊಂಡು 70 ವರ್ಷಗಳೇ ಸಂದರೂ ದೇಶದ ಎಲ್ಲಾ ಪ್ರಜೆಗಳು ಈ ಸ್ವಾತಂತ್ರ್ಯದ ಫಲವನ್ನು ಅನುಭವಿಸದೇ ಇರುವುದು ವಾಸ್ತವವಾಗಿದೆ. ಇಂದಿಗೂ ದೇಶದ ಬಹುದೊಡ್ಡ ವರ್ಗವೂ ತಾರತಮ್ಯಕ್ಕೊಳಗಾಗಿದೆ. ದಲಿತ-ಮುಸ್ಲಿಂ ಹಾಗೂ ಅದಿವಾಸಿ ಜನರು ಸಂವಿಧಾನವು ನೀಡಿದ ಯಾವುದೇ ಹಕ್ಕುಗಳು ದೊರೆಯದೆ ಜೀವಿಸುತ್ತಿದ್ದಾರೆ. ದೇಶದ ಈ ಪರಿಸ್ಥಿತಿಯನ್ನು ಬದಲಾಯಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫಾರಂ ನ ಕೇಂದ್ರ ಸಮಿತಿ ಉಪಾಧ್ಯಕ್ಷ ಇ.ಎಂ ಅಬ್ದುಲ್ಲಾ, ಇಘ್ನೋ ದ ಪ್ರಧಾನ ವ್ಯಾಪಸ್ಥಾಪಕ ರಿಯಾರ್ ಮುಲ್ಲಾ, ಶಿವಮೊಗ್ಗ ವೆಲ್‌ಫೇರ್ & ಎಜಕೇಶನ್ ಸೊಸೈಟಿಯ ಅಧ್ಯಕ್ಷ ಮುಖ್ತಾರ್ ಅಹ್ಮದ್, ಜಿದ್ದಾ ತಮಿಳ್ ಸಂಘಂ ನ ಕಾರ್ಯಕಾರಿ ಸಮಿತಿ ಸದಸ್ಯ ಗಣೇಶನ್, ಇಂಡಿಯಾ ಫಾರಂ ನ ಪ್ರ. ಕಾರ್ಯದರ್ಶಿ ಅಯ್ಯೂಬ್, ಇಂಡಿಯಾ ಸೋಶಿಯಲ್ ಫಾರಂ ಜಿದ್ದಾ ಇದರ ತಮಿಳುನಾಡು ಘಟಕಾಧ್ಯಕ್ಷ ಫಯಾರ್, ಕರ್ನಾಟಕ ಘಟಕಾಧ್ಯಕ್ಷ ಹಾರಿಸ್, ಕೇರಳ ಘಟಕಾಧ್ಯಕ್ಷ ಹನೀಫ್ ಹಾಗೂ ಇನ್ನಿತರು ಭಾಗವಹಿಸಿದ್ದರು.