ಒಮಾನ್‌ನಲ್ಲಿ ಇಂಡಿಯನ್ ಪ್ರವಾಸಿ ಫೋರಂನಿಂದ ಸ್ವಾತಂತ್ರೋತ್ಸವ ಆಚರಣೆ

Update: 2016-08-28 06:13 GMT

ಒಮಾನ್, ಆ.28: ಇಂಡಿಯನ್ ಪ್ರವಾಸಿ ಫೋರಂ ವತಿಯಿಂದ ಭಾರತದ 70ನೆ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮವು ಇಲ್ಲಿನ ಸೊಹಾರ್‌ನಲ್ಲಿರುವ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಆ.26ರಂದು ವಿಜೃಂಭಣೆಯಿಂ ನಡೆಯಿತು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಕ್ಸೂದ್ ಚಂದಾವರ್ ಹೊನ್ನಾವರ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಒಗ್ಗಟ್ಟುವಿಕೆಯಿಂದ ಮಾತ್ರ ಆಡಳಿತ ಶಾಹಿಗಳಿಂದ ತಮ್ಮ ಹಕ್ಕು ಬಾಧ್ಯತೆ ಪಡೆಯಲು ಸಾಧ್ಯ. ಪ್ರಜೆಗಳು ಒಗ್ಗಟ್ಟಾಗದೆ ಅಲೆ ಅಲೆಯಾಗಿ ಚದುರಿದಾಗ ಸಂವಿಧಾನದ ಕಾನೂನಾತ್ಮಕ ಹಕ್ಕುಗಳನ್ನು ಪಡೆಯುವ ವಿಫಲ ಯತ್ನವು ಮುಂದುವರಿಯುತ್ತಲೇ ಇರುತ್ತದೆ ಮತ್ತು ಅಧಿಕಾರಶಾಹಿಗಳು ತಮ್ಮ ವೈಯುಕ್ತಿಕ ಲಾಭಕ್ಕಾಗಿ ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇದರ ವಿರುದ್ದ ಪ್ರಜ್ಞಾವಂತ ನಾಗರಿಕರು ಒಗ್ಗಟ್ಟಿನ ಬಲವನ್ನು ತೋರ್ಪಡಿಸಲೇ ಬೇಕಿದೆ ಎಂದರು.
 ಪ್ರವಾಸಿ ಫೋರಂ ಅಧ್ಯಕ್ಷ ಯೂಸುಫ್ ಹೈದರ್ ಮುಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವಾಸಿಗಳಾದ ನಾವು ಇಂದಲ್ಲ ನಾಳೆ ನಮ್ಮ ದೇಶಕ್ಕೆ ಹಿಂದಿರುಗಬೇಕಾಗಿರುವುದರಿಂದ ಇಲ್ಲಿದ್ದು ಕೊಂಡು ದೇಶದ ಉನ್ನತಿಯ ಬಗ್ಗೆ ಚಿಂತಿಸಬೇಕಾಗಿರುವುದು ಅನಿವಾರ್ಯ ಎಂದರು.
 ಸ್ವತಂತ್ರ ಭವ್ಯ ಭಾರತದಲ್ಲಿ ಜಾತಿ-ಮತಗಳನ್ನು ಹೋಗಲಾಡಿಸಿ ದೇಶಪ್ರೇಮದ ಸಾರವನ್ನು ತೋರಿಸುವ ಅನ್ಸಾರ್ ಕಾಟಿಪಳ್ಳ ನಿರ್ದೇಶಿಸಿದ ಆಸಿಫ್ ಬೈಲೂರು ಮತ್ತು ತಂಡದ ‘ವಿಡಂಬಣೆ’ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ವೇದಿಕೆಯಲ್ಲಿ ಇಂಡಿಯನ್ ಪ್ರವಾಸಿ ಫೋರಂ ಬತೀನ ರೀಜನ್ ಅಧ್ಯಕ್ಷ ಅಬ್ದುಲ್ ಮುಬಾರಕ್ ಕಾರಾಜೆ, ಸೊಹಾರ್ ಅಧ್ಯಕ್ಷ ಮೊಹಿದಿನ್ ಕಿನ್ನಿಗೋಳಿ ಉಪಸ್ಥಿತರಿದ್ದರು.
ಮುಝಫ್ಫರ್ ಮತ್ತು ಅನ್ಸಾರ್ ಕಾಟಿಪಳ್ಳ ಅವರ ದೇಶಭಕ್ತಿ ಹಾಡುಗಳು ಕಾರ್ಯಕ್ರಮಕ್ಕೆ ಮೆರುಗುನೀಡಿತ್ತು.
ಆಸಿಫ್ ಅಲಿ ಶಿರ್ವ ಸ್ವಾಗತಿಸಿದರು. ಮೊಹಿದಿನ್ ಕಿನ್ನಿಗೋಳಿ ವಂದಿಸಿದರು. ಹಾಶಿಂ ಶೈಕ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.
ವರದಿ: ಅನ್ಸಾರ್ ಕಾಟಿಪಳ್ಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News