ಹಜ್ ನಿಯಮ ಉಲ್ಲಂಘಿಸಿದವರಿಗೆ ಕಾದಿದೆ ಭಾರೀ ದಂಡ, ಜೈಲು, ಗಡೀಪಾರು ಶಿಕ್ಷೆ

Update: 2016-08-29 08:42 GMT

ಜಿದ್ದಾ, ಆ.29: ಈ ವರ್ಷದ ಹಜ್ ಯಾತ್ರೆಯು ಸುಲಲಿತವಾಗಿ ನಡೆಯುವ ಸಲುವಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿರುವ ಮಕ್ಕಾ ಗವರ್ನರೇಟ್, ನಿಯಮ ಉಲ್ಲಂಘಿಸುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಭಾರೀ ಮೊತ್ತದ ದಂಡ ವಿಧಿಸಲಿದೆ.

ಪರವಾನಿಗೆಯಿಲ್ಲದೆ ಯಾತ್ರಾರ್ಥಿಗಳನ್ನು ಯಾವುದೇ ವಾಹನದಲ್ಲಿ ಸಾಗಿಸುವುದು ಕಂಡುಬಂದಲ್ಲಿ ತಪ್ಪಿತಸ್ಥರಿಗೆ 1,00,00 ಸೌದಿ ರಿಯಾಲ್ ತನಕ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದಲ್ಲದೆ, ವಾಹನಗಳನ್ನೂ ವಶಪಡಿಸಿಕೊಳ್ಳಲಾಗುವುದು. ತಪ್ಪಿತಸ್ಥರನ್ನು ಜಾಮೀನಿನ ಮೇಲೆಯೂ ಬಿಡುಗಡೆಗೊಳಿಸಲಾಗುವುದಿಲ್ಲವೆಂದು ಗವರ್ನರೇಟ್ ಹೇಳಿಕೆಯೊಂದು ತಿಳಿಸಿದೆ.

ಪರವಾನಿಗೆಯಿಲ್ಲದೆ ಹಜ್ ಯಾತ್ರೆಯನ್ನು ಯಾರಾದರೂ ಕೈಗೊಂಡಲ್ಲಿ ತಪ್ಪಿತಸ್ಥರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗುವುದಲ್ಲದೆ, ಮುಂದಿನ 10 ವರ್ಷಗಳ ತನಕ ಆತ ಅಥವಾ ಆಕೆಗೆ ಸೌದಿ ಅರೇಬಿಯಾ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲವೆಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಗವರ್ನರೇಟ್ ಹೇಳಿಕೊಂಡಿದೆ.

ವಿದೇಶೀಯನೊಬ್ಬ ತನ್ನ ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲುಳಿದರೆ ಆತನಿಗೆ 15,000 ಸೌದಿ ರಿಯಾಲ್ ದಂಡ ವಿಧಿಸಿ ಗಡೀಪಾರು ಮಾಡಲಾಗುವುದು. ಒಬ್ಬ ವ್ಯಕ್ತಿ ಎರಡನೆ ಬಾರಿಗೆ ಇಂತಹುದೇ ತಪ್ಪುಮಾಡಿದರೆ ಆತನಿಗೆ 25,000 ಸೌದಿ ರಿಯಾಲ್ ದಂಡ, ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ ನಂತರ ಗಡೀಪಾರು ಮಾಡಲಾಗುವುದು. ಮೂರನೆ ಬಾರಿ ಇದೇ ತಪ್ಪನ್ನು ಮಾಡಿದವರಿಗೆ 50,000 ಸೌದಿ ರಿಯಾಲ್ ದಂಡ, ಆರು ತಿಂಗಳು ಜೈಲು ಮತ್ತು ಗಡೀಪಾರು ಶಿಕ್ಷೆ ವಿಧಿಸಲಾಗುವುದು.

ಯಾತ್ರಿಕರನ್ನು ಕರೆದೊಯ್ಯುವಾಗ, ಅವರಿಗೆ ಉದ್ಯೋಗ ಯಾ ಆಶ್ರಯ ನೀಡುವಾಗ ನಿಯಮ ಉಲ್ಲಂಘಿಸಿದರೆ ಅಥವಾ ನಿಯಮ ಉಲ್ಲಂಘಕರನ್ನು ಬೆಂಬಲಿಸಿದರೆ ಅವರಿಗೆ 15,000 ಸೌದಿ ರಿಯಾಲ್ ದಂಡ ವಿಧಿಸಲಾಗುವುದು. ತಪ್ಪಿತಸ್ಥ ವಿದೇಶೀಯನಾಗಿದ್ದರೆ ಹಾಗೂ ಪ್ರಥಮ ಬಾರಿ ನಿಯಮ ಉಲ್ಲಂಘಿಸಿದ್ದರೆ ಆತನನ್ನು ಗಡೀಪಾರು ಮಾಡಲಾಗುವುದು ಎಂದು ಹೇಳಲಾಗಿದೆ. ಆದರೆ ಎರಡನೆ ಬಾರಿ ಅದೇ ತಪ್ಪು ಮಾಡಿದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ, 30,000 ಸೌದಿ ರಿಯಾಲ್ ದಂಡ ಹಾಗೂ ಗಡೀಪಾರು (ವಿದೇಶೀಯನಾಗಿದ್ದರೆ) ಶಿಕ್ಷೆ ವಿಧಿಸಲಾಗುವುದು. ಮೂರನೆ ಬಾರಿ ತಪ್ಪು ಮಾಡಿದ್ದೇ ಆದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಹಾಗೂ 1,00,000 ಸೌದಿ ರಿಯಾಲ್ ದಂಡ ಹಾಗೂ ಗಡೀಪಾರು (ತಪ್ಪಿತಸ್ಥ ವಿದೇಶೀಯನಾಗಿದ್ದರೆ) ಶಿಕ್ಷೆ ವಿಧಿಸಲಾಗುವುದು.
ನಿಯಮಗಳನ್ನು ಉಲ್ಲಂಘಿಸಿದಂತೆಲ್ಲಾ ದಂಡದ ಪ್ರಮಾಣವೂ ಹೆಚ್ಚುವುದು ಎಂದು ತಿಳಿಸಲಾಗಿದೆ.

ತಮ್ಮ ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲೇ ಉಳಿಯುವ ಹಜ್ ಯಾತ್ರಿಕರ ಬಗ್ಗೆ ದೂರು ನೀಡಲು ವಿಫಲರಾಗುವ ಹಜ್ ಸೇವಾ ಪೂರೈಕೆದಾರರಿಗೆ 25,000 ಸೌದಿ ರಿಯಾಲ್ ತನಕ ದಂಡ ವಿಧಿಸಲಾಗುವುದು. ಎರಡನೆ ಹಾಗೂ ಮೂರನೆ ಬಾರಿ ಇಂತಹ ತಪ್ಪು ಮಾಡಿದರೆ ಕ್ರಮವಾಗಿ 50,000 ಹಾಗೂ 1,00,000 ಸೌದಿ ರಿಯಾಲ್ ದಂಡ ವಿಧಿಸಲಾಗುವುದು.

ಕಳೆದ ವರ್ಷ 76 ಸಂಸ್ಥೆಗಳು ಯಾತ್ರಾರ್ಥಿಗಳನ್ನು ಪರವಾನಿಗೆ ಇಲ್ಲದೇ ಕರೆದೊಯ್ಯುವುದು ಪತ್ತೆಯಾಗಿತ್ತಲ್ಲದೆ ಈ ತಪ್ಪಿಗೆ ಅವರಿಗೆ 3.7 ಮಿಲಿಯನ್ ಸೌದಿ ರಿಯಾಲ್ ದಂಡ ಕೂಡ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News