188,747 ಮಂದಿಗೆ ಮಕ್ಕಾ ಪ್ರವೇಶಕ್ಕೆ ತಡೆ
ಜಿದ್ದಾ,ಸೆ.6 : ಹಜ್ ಪರ್ಮಿಟ್ ಇಲ್ಲದೆಯೇ ಮಕ್ಕಾ ಪ್ರವೇಶಿಸಲು ಯತ್ನಿಸಿದ1,88,747 ಜನರನ್ನು ವಿವಿಧ ತಪಾಸಣಾ ಕೇಂದ್ರಗಳಿಂದ ಹಿಂದಕ್ಕೆ ಕಳುಹಿಸಲಾಗಿದೆ ಎಂದು ಮಕ್ಕಾ ಪೊಲೀಸ್ ನಿರ್ದೇಶಕ ಮೇ. ಜ. ಸಯೀದ್ ಅಲ್- ಖರ್ನಿ ಹೇಳಿದ್ದಾರೆ.
ಅಕ್ರಮವಾಗಿ ಮಕ್ಕಾ ಪ್ರವೇಶಿಸಲೆತ್ನಿಸಿದ 84,965 ವಾಹನಗಳನ್ನೂ ತಡೆಯಲಾಗಿದೆ. ಸೂಕ್ತ ದಾಖಲೆ ಪತ್ರಗಳನ್ನು ಹೊಂದದ ಯಾತ್ರಾರ್ಥಿಗಳು ಸಂಚರಿಸುತ್ತಿದ್ದಒಟ್ಟು 48 ಮಿನಿ ಬಸ್ಸುಗಳನ್ನೂ ವಶಪಡಿಸಿಕೊಳ್ಳಲಾಗಿದೆ, ಎಂದು ಅವರು ಮಾಹಿತಿ ನೀಡಿದ್ದಾರೆ. ತಪಾಸಣೆ ವೇಳೆ 22 ನಕಲಿ ಹಜ್ ಯಾತ್ರೆಗಳನ್ನು ಆಯೋಜಿಸಿರುವ ವಿಚಾರವೂ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಮಕ್ಕಾ ಸುತ್ತಮುತ್ತ ಒಟ್ಟು 109 ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆಯೆಂದು ತಿಳಿಸಿದ ಖರ್ನಿ ಈ ಕೇಂದ್ರಗಳ ಮುಖಾಂತರ ಅಕ್ರಮವಾಗಿ ನಗರ ಪ್ರವೇಶಿಸುವವರನ್ನು ತಡೆಯಲು ಸಾಧ್ಯವಾಗಿದೆ, ಎಂದಿದ್ದಾರೆ.
ತರುವಾಯ ಮಕ್ಕಾದಲ್ಲಿಹಜ್ ವಿಚಾರಸಂಕಿರಣ- ‘ಹಜ್ ಯಾತ್ರೆ-ಇಂದು ಹಾಗೂ ಹಿಂದೆ’’ ಆಯೋಜಿಸಲಾಗಿತ್ತು. ವಿಚಾರಸಂಕಿರಣವನ್ನು ಉದ್ದೇಶಿಸಿ ಮಾತನಾಡಿದಹಜ್ ಹಾಗೂ ಉಮ್ರಾ ಸಚಿವ ಮುಹಮ್ಮದ್ ಸಲೇಹ್ ಬೆಂಟನ್, ವಿದ್ವಾಂಸರ ನಡುವೆ ಉತ್ತಮ ಸಂವಹನಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರಲ್ಲದೆ ಇಸ್ಲಾಂ ಸಂಯಮ ಹಾಗೂ ಶಾಂತಿ ಪ್ರತಿಪಾದಿಸುವ ಧರ್ಮವಾಗಿದೆ ಎಂದರು.
ಈಜಿಪ್ಟ್ ಗ್ರ್ಯಾಂಡ್ ಮುಫ್ತಿ ಶವ್ಕಿ ಆಲಂ ಮಕ್ಕಾ ಯಾತ್ರಿಗಳಿಗೆ ದೊರೆಯುತ್ತಿರುವ ಉತ್ತಮ ಸೌಲಭ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ವಿಶ್ವದಾದ್ಯಂತ ಮುಸ್ಲಿಂ ರಾಷ್ಟ್ರಗಳಿಂದ200ಕ್ಕೂ ಹೆಚ್ಚು ವಿದ್ವಾಂಸರು ಈ ವಾರ್ಷಿಕ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿದ್ದಾರೆ.
ತರುವಾಯ ಮಕ್ಕಾ ಯಾತ್ರೆ ಕೈಗೊಳ್ಳಲಿರುವ ಒಟ್ಟು 19,000 ಯೆಮೆನ್ ದೇಶದ ಯಾತ್ರಿಗಳಲ್ಲಿ 14,000 ಮಂದಿ ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ.