ಇರಾನ್ ಜನರು ‘ಮುಸ್ಲಿಮರಲ್ಲ’ ಎಂದ ಸೌದಿ ಪ್ರಧಾನ ಮುಫ್ತಿ
ರಿಯಾದ್, ಸೆ.7: ಸೌದಿ ಅರೆಬಿಯ ಸರಕಾರ ಹಜ್ ಯಾತ್ರೆ ನಿರ್ವಹಿಸುವ ರೀತಿಯನ್ನು ಟೀಕಿಸಿ ಇರಾನ್ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಟೀಕಿಸಿದ ಮರು ದಿನವೇ ಇರಾನ್ ಜನರು ‘ಮುಸ್ಲಿಮರಲ್ಲ’ ಎಂದು ಸೌದಿ ಅರೆಬಿಯದ ಪ್ರಧಾನ ಮುಫ್ತಿ ಅಬ್ದುಲ್ ಅಝೀಝ್ ಅಲ್ ಶೇಖ್ ಹೇಳಿದ್ದಾರೆ. ಖಾಮಿನೈಯವರ ಆರೋಪಗಳು ‘‘ಆಶ್ಚರ್ಯ ಹುಟ್ಟಿಸುವಂತಹದ್ದಲ್ಲ’’ ಎಂದು ಶೇಖ್ ಹೇಳಿದ್ದಾರೆ.
ಕಳೆದ ವರ್ಷದ ಹಜ್ ಸಂದರ್ಭ ಉಂಟಾದ ಕಾಲ್ತುಳಿತದಲ್ಲಿ ಸಿಲುಕಿದ ಯಾತ್ರಿಗಳನ್ನು ಸೌದಿಗಳು ‘ಕೊಲೆ’ ಮಾಡಿದ್ದಾರೆಂದು ಖಮೇನಿ ಸೋಮವಾರ ಆರೋಪಿಸಿದ್ದರು. ‘‘ಹೃದಯಹೀನ ಸೌದಿಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಅಥವಾ ಅವರಿಗೆ ಕನಿಷ್ಠ ನೀರು ನೀಡುವ ಬದಲು ಅವರನ್ನು ಇತರ ಕಳೇಬರಗಳೊಂದಿಗೆ ಪೆಟ್ಟಿಗೆಗಳಲ್ಲಿ ತುಂಬಿ ಯಾವುದೇ ಸಾಕ್ಷ್ಯ ದೊರೆಯದಂತೆ ಅವರನ್ನು ಕೊಂದಿದ್ದಾರೆಂದು ಖಮೇನಿ 464 ಇರಾನಿಯರು ಸೇರಿದಂತೆ 2,462 ಜನರನ್ನು ಬಲಿ ಪಡೆದ ದುರಂತದ ಸ್ಮರಣಾ ದಿನದಂದು ಹೇಳಿದ್ದರೆಂದು ಕೆಲ ವರದಿಗಳು ತಿಳಿಸಿದ್ದವು.
ಈ ಬಗ್ಗೆ ಮಕ್ಕಾದ ದೈನಿಕವೊಂದು ಶೇಖ್ ಅವರನ್ನು ಪ್ರಶ್ನಿಸಿದಾಗ ‘‘ಮೊದಲಾಗಿ ಅವರು ಮುಸ್ಲಿಮರಲ್ಲವೆಂಬುದನ್ನು ನಾವು ತಿಳಿಯಬೇಕು ಎಂದರು.‘‘ ಅವರು ಮಗಿಯ ಪುತ್ರರು ಹಾಗೂ ಮುಸ್ಲಿಮರೊಂದಿಗಿನ, ಮುಖ್ಯವಾಗಿ ಸುನ್ನಿಗಳೊಂದಿಗಿನ ಅವರ ದ್ವೇಷ ಹಳೆಯದು’’ಎಂದು ಹೇಳಿದರು.
ಸೌದಿ ಅರೆಬಿಯದ ಜನಸಂಖ್ಯೆಯ ಶೇ.85-90 ರಷ್ಟಿರುವ ಸುನ್ನಿಗಳ ಹಾಗೂ ಇರಾನಿನ ಜನಸಂಖ್ಯೆಯ ಶೇ.90-95 ರಷ್ಟಿರುವ ಶಿಯಾಗಳ ನಡುವಣ ವೈರತ್ವ ಏಳನೆ ಶತಮಾನದಿಂದಲೂ ನಡೆದು ಬಂದಿದೆ. ಭಯೋತ್ಪಾದನೆಯ ಆರೋಪ ಸಾಬೀತಾಗಿ ಶಿಯಾ ಧಾರ್ಮಿಕ ನಾಯಕನಿಗೆ ಸೌದಿಯಲ್ಲಿ ಮರಣದಂಡನೆ ವಿಧಿಸಿದ್ದರಿಂದ ಆಕ್ರೋಶಿತಗೊಂಡ ಇರಾನ್ ಜನರು ಅಲ್ಲಿನ ಸೌದಿ ದೂತಾವಾಸಕ್ಕೆ ಹಾನಿಗೈದ ನಂತರ ಸೌದಿ ಅರೆಬಿಯ ಇರಾನ್‌ನೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿತ್ತು.