ಮಕ್ಕಾ: ಪವಿತ್ರ ಹಜ್‌ಗೆ ದಿನಗಣನೆ
ಮಕ್ಕಾ, ಸೆ.7: ಪವಿತ್ರ ಹಜ್‌ಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಮಕ್ಕಾದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಆಯಕಟ್ಟಿನ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗಾಗಲೇ ವಿವಿಧ ರಾಷ್ಟ್ರಗಳ ಲಕ್ಷಾಂತರ ಮಂದಿ ಹಜ್ ಯಾತ್ರಿಕರು ಮಕ್ಕಾದಲ್ಲಿ ಬೀಡುಬಿಟ್ಟಿದ್ದು, ಇನ್ನಷ್ಟು ಮಂದಿ ಮದೀನಾ ತಲುಪಿದ್ದಾರೆ.
ಈ ತಿಂಗಳ 9ರಿಂದ 14 ರವರೆಗೆ ಹಜ್ ವಿಧಿವಿಧಾನಗಳು ನಡೆಯಲಿವೆ. ಆ.4ರಿಂದ ಕರ್ನಾಟಕದ ಹಜ್ ಯಾತ್ರಿಕರು ಮದೀನಾ ತಲುಪಲು ಪ್ರಾರಂಭಿಸಿದ್ದು, ಮದೀನಾದಲ್ಲಿ 8 ದಿನಗಳ ಕಾಲ ವಾಸ್ತವ್ಯ ಹೂಡಿದ ಹಜ್ ಯಾತ್ರಿಕರು ಆ.13ರಂದು ಮಕ್ಕಾಗೆ ಪ್ರವೇಶಿಸಿದ್ದಾರೆ. ಭಾರತದಿಂದ ಹಜ್ ಕಮಿಟಿ ಮತ್ತು ಖಾಸಗಿಯಾಗಿ 1.30 ಲಕ್ಷ ಮಂದಿ ಈ ಬಾರಿ ಹಜ್‌ಗೆ ಆಗಮಿಸಿದ್ದಾರೆ.
ಮಂಗಳೂರಿನಿಂದ 600ಕ್ಕೂ ಅಧಿಕ ಮಂದಿ ಈ ಬಾರಿ ಪ್ರಯಾಣ ಬೆಳೆಸಿದ್ದಾರೆ. ಈ ತಿಂಗಳ 5ರಂದು ಮೊದಲ ತಂಡ ಮದೀನಾಕ್ಕೆ ಪ್ರಯಾಣ ಬೆಳೆಸಿತ್ತು. ಕೊನೆಯ ತಂಡ 7ರಂದು ಮದೀನಾ ತಲುಪಿತ್ತು. ಹಜ್ ಕಮಿಟಿಯಲ್ಲಿ ಆಗಮಿಸಿದ ಯಾತ್ರಿಕರಲ್ಲಿ ‘ಗ್ರೀನ್’ ಹಾಗೂ ‘ಅಝೀಝಿಯ’ ಎಂಬ ಎರಡು ದರ್ಜೆಗಳಿದ್ದು, ‘ಗ್ರೀನ್’ ವಿಭಾಗಕ್ಕೆ ಮಸ್ಜಿದುಲ್ ಹರಾಮ್ ಬಳಿ ಹಾಗೂ ‘ಅಝೀಝಿಯ’ ವಿಭಾಗದ ಯಾತ್ರಿಕರಿಗೆ 12 ಕಿ.ಮೀ. ದೂರದ ಅಝೀಝಿಯದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.
ಅಝೀಝಿಯದಲ್ಲಿ ಇರುವ ಯಾತ್ರಿಕರಿಗೆ ದಿನದ 24 ಗಂಟೆಯೂ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ನೂರಕ್ಕೂ ಅಧಿಕ ಬಸ್‌ಗಳು ಈ ಸೇವೆಯಲ್ಲಿ ನಿರತವಾಗಿತ್ತು. ಹಜ್ ದಿನ ಹತ್ತಿರ ಬರುತ್ತಿರುವುದರಿಂದ ಬುಧವಾರದಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಭಾರತೀಯ ಹಜ್ ಕಮಿಟಿಯ ವತಿಯಿಂದ ಉಚಿತ ವೈದ್ಯಕೀಯ ಸೇವೆಯನ್ನು ದಿನದ 24 ಗಂಟೆಗಳ ಕಾಲ ನೀಡಲಾಗುತ್ತಿದೆ. ಹಜ್ಜಾಜಿಗಳ ಸೇವೆಗಾಗಿ ಸಾವಿರಾರು ಸ್ವಯಂಸೇವಕರು ಸೇವೆಯಲ್ಲಿ ನಿರತರಾಗಿದ್ದಾರೆ.