ಹಜ್ ಸೇವೆಗೆ ಐಎಫ್‌ಎಫ್‌ನ 800 ಸ್ವಯಂಸೇವಕರ ತಂಡ ಸಜ್ಜು
ಜಿದ್ದಾ, ಸೆ.7: ಈ ಬಾರಿ ಹಜ್ ಯಾತ್ರಿಕರ ಸೇವೆಗಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ (ಐಎಫ್‌ಎಫ್) 800 ಸ್ವಯಂ ಸೇವಕರ ತಂಡವನ್ನು ಸಜ್ಜುಗೊಳಿಸಿದೆ. ವಿವಿಧ ರಾಜ್ಯಗಳಿಂದ ಬಂದ ಅನಿವಾಸಿ ಭಾರತೀಯರು ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಲಿದ್ದು, ಇಂಗ್ಲೀಷ್ ಮತ್ತು ಅರೇಬಿಕ್ ಹಾಗೂ ಇತರ ಸ್ಥಳೀಯ ಭಾಷೆಗಳನ್ನು ಬಲ್ಲವರಾಗಿದ್ದು, ಹಜ್ ಯಾತ್ರಿಕರ ಸೇವೆಗೆ ನೆರವಾಗಲಿದೆ ಎಂದು ಐಎಫ್‌ಎಫ್‌ನ ಪ್ರಾದೇಶಿಕ ಅಧ್ಯಕ್ಷ ಶಂಸುದ್ದೀನ್ ಕೆ.ಎಂ. ತಿಳಿಸಿದ್ದಾರೆ.
ಶರಫಿಯಾದ ಇಂಫಾಲ ಗಾರ್ಡನ್‌ನಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಕ್ಕಾ, ಅಝೀಝಿಯಾಗಳಲ್ಲಿರುವ ಹಜ್ ಯಾತ್ರಾರ್ಥಿಗಳ ವಸತಿ ಪ್ರದೇಶ, ಹಜ್ ಮಿಶನ್‌ನ ವೈದ್ಯಕೀಯ ಸೌಕರ್ಯ, ಅರಫಾದ ಮಶಮೀರ್ ರೈಲು ನಿಲ್ದಾಣ, ಹಲವು ಔಷಧಾಲಯಗಳು ಹಾಗೂ ಮೀನಾದಲ್ಲಿ ಸ್ವಯಂ ಸೇವಕರು ಸೇವೆಗೆಯ್ಯಲಿದ್ದಾರೆ. ಹಜ್ ಯಾತ್ರಾರ್ಥಿಗಳು ತಮ್ಮ ಸ್ಥಳಗಳಿಗೆ ತಲುಪಲು ಮತ್ತು ಅಗತ್ಯವಿದ್ದಾಗ ಔಷಧ ಹಾಗೂ ಗಾಲಿ ಕುರ್ಚಿಗಳನ್ನು ಪಡೆಯಲು ನೆರವಾಗಲಿದ್ದಾರೆ. ಸುಲಭ ಹಜ್ ನಿರ್ವಹಣೆಗಾಗಿ ಆರೋಗ್ಯ ಹಾಗೂ ಸುರಕ್ಷಣಾ ಸಲಹೆಗಳನ್ನೂ ನೀಡಲಿದ್ದಾರೆ. ಸಂಪೂರ್ಣ ಕಾರ್ಯಾಚರಣೆಗಾಗಿ 5 ತಂಡಗಳಂತೆ ಸ್ವಯಂ ಸೇವಕರನ್ನು ವಿಭಾಗಿಸಲಾಗಿದೆ. ಮಕ್ಕಾ ತಂಡದಲ್ಲಿ 100 ಸ್ವಯಂ ಸೇವಕರು, ಅರಫಾ ತಂಡದಲ್ಲಿ 100, ಮೀನಾ ಟೆಂಟ್ ಸೇವಾ ತಂಡದಲ್ಲಿ 200 ಮತ್ತು ಮೀನಾದಲ್ಲಿ 350 ಸ್ವಯಂ ಸೇವಕರು ಸೇವೆಗೈಯಲಿದ್ದಾರೆ. ಅಲ್ಲದೆ 50 ಮಂದಿ ಮೀನಾದ ವಿವಿಧ ಆಸ್ಪತ್ರೆ ಮತ್ತು ಔಷಧಾಲಯಗಳಲ್ಲಿ ಸೇವೆಗೆಯ್ಯಲಿದ್ದಾರೆ ಎಂದು ಹೇಳಿದರು.
ಹಜ್ಜ್ ಯಾತ್ರಾರ್ಥಿಗಳ ಮೊದಲ ತಂಡ ಇಲ್ಲಿಗೆ ತಲುಪುವುದರೊಂದಿಗೆ ಸ್ವಯಂ ಸೇವಕರು ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಸ್ವಯಂ ಸೇವಕರು ಮಸ್ಜಿದುಲ್ ಹರಾಂ ಮತ್ತು ಅಝೀಝಿಯಾಗಳಲ್ಲಿ ಸೇವೆಗೈಯ್ಯುತ್ತಿದ್ದಾರೆ. ಮದೀನಾದಲ್ಲೂ ಸ್ವಯಂ ಸೇವಕರು ಹಜ್ ಯಾತ್ರಾರ್ಥಿಗಳಿಗೆ ನೆರವಾಗುತ್ತಿದ್ದಾರೆ ಎಂದು ಸಂಶುದ್ದೀನ್ ತಿಳಿಸಿದರು.
ಭಾರತೀಯ ಹಜ್ ಯಾತ್ರಾರ್ಥಿಗಳಿಗೆ ನೆರವಾಗುವುದಕ್ಕಾಗಿ ಮಕ್ಕಾ ಹಾಗೂ ಅಝೀಝಿಯಗಳಲ್ಲಿರುವ ಯಾತ್ರಾರ್ಥಿಗಳ ವಸತಿ ಪ್ರದೇಶವನ್ನೊಳಗೊಂಡ ಸಂಪೂರ್ಣ ನಕ್ಷೆಯೊಂದನ್ನು ಇಂಡಿಯಾ ಫ್ರೆಟರ್ನಿಟಿ ಫಾರಂ ಸಿದ್ದಪಡಿಸಿದೆ. ಮೀನಾದ ಟೆಂಟ್ ಸಿಟಿಯ ತಾಜಾ ನಕ್ಷೆಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದರು.
ಕಳೆದ ವರ್ಷ ಇಂಡಿಯಾ ಫ್ರೆಟರ್ನಿಟಿ ಫಾರಂ ಮೀನಾದಲ್ಲಿ ಟೆಂಟ್‌ಗಳನ್ನು ಪತ್ತೆ ಹಚ್ಚುವುದಕ್ಕಾಗಿ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿತ್ತು. ಈ ಬಾರಿ ಈ ಆ್ಯಪ್‌ನ ಅಪ್ಟೇಟೆಡ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಆ್ಯಪ್ ಅಝೀಝಿಯಾ ವಸತಿ ಪ್ರದೇಶ ಮತ್ತು ಮೀನಾದ ಇಡೀ ಟೆಂಟ್ ಸಿಟಿಯನ್ನು ಒಳಗೊಳ್ಳಲಿದ್ದು, ಹಾಜಿಗಳಿಗೆ ತಮ್ಮ ಸ್ಥಳಗಳಿಗೆ ಅಥವಾ ವಸತಿ ಕಟ್ಟಡಗಳಿಗೆ ಸುಲಭವಾಗಿ ತಲುಪಲು ನೆರವಾಗಲಿದೆ. ಕೋ-ಆರ್ಡಿನೇಟರ್ ಮುದಸ್ಸಿರ್, ಅಸಿಸ್ಟೆಂಟ್ ಕೋ-ಆರ್ಡಿನೇಟರ್ ಫೈಝಲ್ ಟಿ., ಸ್ವಯಂ ಸೇವಕ ನಾಯಕ ಮುಜೀಬುರ್ರಹ್ಮಾನ್, ಇಸ್ಮಾಯೀಲ್‌ರ ನೇತೃತ್ವದಲ್ಲಿ ಸಂಪೂರ್ಣ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಐಎಫ್‌ಎಫ್‌ನ ಪ್ರಾದೇಶಿಕ ಕಾರ್ಯದರ್ಶಿ ಮುಹಮ್ಮದ್ ಅಲಿ ಕೆ., ಹಜ್ ಕೋ-ಆರ್ಡಿನೇಟರ್ ಮುದಸ್ಸಿರ್, ಅಸಿಸ್ಟೆಂಟ್ ಕೋ-ಆರ್ಡಿನೇಟರ್ ಫೈಝಲ್ ಟಿ. ಉಪಸ್ಥಿತರಿದ್ದರು.