ಯುಎಇ: ದಯಾಮರಣ,ಕ್ಲೊನಿಂಗ್ ಸಂಪೂರ್ಣ ನಿಷೇಧ
ಅಬುಧಾಬಿ, ಸೆ.8: ಮಾನವ ಕ್ಲೋನಿಂಗ್ ಮತ್ತು ದಯಾಮರಣವನ್ನು ಸಂಪೂರ್ಣವಾಗಿ ನಿಷೇಧಿಸಿ ಯುಎಇಯಲ್ಲಿ ಹೊಸ ಕಾನೂನು ಜಾರಿಗೆ ತರಲಾಗಿದೆ. ರೋಗಿಗಳು ಮತ್ತು ಸಂಬಂಧಿಕರ ಸಮ್ಮತಿ ಇದ್ದರೂ ಕೂಡಾ ಯಾವ ಕಾರಣಕ್ಕೂ ದಯಾಮರಣ ಅನುಮತಿಸಲಾಗದು ಎಂದು ಕಾನೂನಿನಲ್ಲಿದೆ ಎಂದು ವರದಿತಿಳಿಸಿದೆ. ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯಾನ್ ಹೊರಡಿಸಿದ ’ಚಿಕಿತ್ಸಾ ಜವಾಬ್ದಾರಿ ಕಾನೂನಿನಲ್ಲಿ’ ಈ ಎಲ್ಲ ವಿಷಯವನ್ನು ಸ್ಪಷ್ಟಪಡಿಸಲಾಗಿದೆ.
ಶ್ವಾಸೋಚ್ಚಾಸ ಪ್ರಕ್ರಿಯೆ ಸಂಪೂರ್ಣ ನಿಲ್ಲುವ ಶ್ವಾಸಕೋಶ ಸ್ತಂಭನ, ರಕ್ತಸಂಚಲನೆ ಸಂಪೂರ್ಣ ನಿಲ್ಲುವ ಹೃದಯಸ್ತಂಭನ, ಮೆದುಳು ನಿಷ್ಕ್ರಿಯವಾಗಿ ಮಸ್ತಿಷ್ಕ ಮರಣ ಸಂಭವಿಸದೆ ಜೀವರಕ್ಷಾ ಉಪಕರಣಗಳನ್ನು ರೋಗಿಯಿಂದ ತೆಗೆಯುವುದು ಬಹುದೊಡ್ಡ ಅಪರಾಧವಾಗಲಿದೆ. ಹೀಗಿರುವ ಘಟನೆಗಳಲ್ಲಿ ಕನಿಷ್ಠ ಮೂವರು ತಜ್ಞ ವೈದ್ಯರ ಅಭಿಪ್ರಾಯ ಪ್ರಕಾರವೇ ಜೀವರಕ್ಷಾ ಉಪಕರಣವನ್ನು ತೆಗೆದು ರೋಗಿಗೆ ಸಹಜಮರಣಕ್ಕೆ ಬಿಟ್ಟು ಬಿಡಬಹುದಾಗಿದೆ. ಇಂತಹ ಕೇಸುಗಳಲ್ಲಿ ರೋಗಿಗಳ ಅಥವಾ ಅವರ ಸಂಬಂಧಿಕರ ಒಪ್ಪಿಗೆ ಅಗತ್ಯವಿಲ್ಲ. ಆದರೆ ಚಿಕಿತ್ಸೆಯಿಂದ ಪ್ರಯೋಜನವಿಲ್ಲದಿದ್ದರೂ ತನಗೆ ಜೀವರಕ್ಷಾ ಉಪಕರಣಬೇಕಿದೆ ಎಂದು ರೋಗಿ ಹೇಳಿದರೆ ಯಾವಕಾರಣಕ್ಕೂ ಅದನ್ನು ತಡೆಹಿಡಿಯಬಾರದು. ಕಾನೂನು ಉಲ್ಲಂಘಿಸಿದವರಿಗೆ ಹತ್ತುವರ್ಷ ಜೈಲುಶಿಕ್ಷೆಯನ್ನು ಹೊಸ ಕಾನೂನಿನಲ್ಲಿ ನಿಗದಿ ಪಡಿಸಲಾಗಿದೆ.
ಮನುಷ್ಯನ ಜೈವಿಕ ಬದಲಾವಣೆ ಸೃಷ್ಟಿಸುವ ಉದ್ದೇಶದಿಂದ ನಡೆಸುವ ಕ್ಲೋನಿಂಗ್ , ಮನುಷ್ಯ ಕೋಶಗಳ ಪುನರುತ್ಪಾದನೆಯನ್ನೂ ಕಾನೂನು ಮೂಲಕ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ ಆರುವರ್ಷ ಜೈಲು ಅಥವಾ ಒಂದು ಲಕ್ಷದಿಂದ ಎರಡು ಲಕ್ಷ ದಿರ್ಹಮ್‌ವರೆಗೆ ದಂಡವನ್ನು ಮತ್ತು ಅವರೆಡನ್ನೂ ವಿಧಿಸಬಹುದಾಗಿದೆ.
ಅದೇ ವೇಳೆ ಭಿನ್ನ ಲಿಂಗಿಗಳಿಗೆ ಶಸ್ತ್ರಕ್ರಿಯೆ ನಡೆಸುವ ಅನುಮತಿಯನ್ನು ನೀಡಲಾಗಿದೆ. ಮನುಷ್ಯ ಶರೀರದಲ್ಲಿ ಕೃತಕ ಅವಯವಗಳನ್ನು ಇರಿಸುವುದಕ್ಕೂ ಅನುಮತಿ ನೀಡಲಾಗಿದೆ.
ಸಹಜ ರೀತಿಯಲ್ಲಿ ಶಿಶುಗಳಾಗದಿರುವ ದಂಪತಿಗಳು ಬಂಜೆತನಕ್ಕೆ ಚಿಕಿತ್ಸೆ ನಡೆಸಬಹುದಾಗಿದೆ. ಕೃತಕ ಗರ್ಭಧಾರಣೆ, ಐವಿಎಫ್ (ಪ್ರಣಾಲೀಯ ಫಲೀಕರಣ) ನಡೆಸಬಹುದಾಗಿದೆ. ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರ ಸಹಾಯದೊಂದಿಗೆ ಗರ್ಭದಾರಣೆಗೆ ಒಪ್ಪಿಗೆ ಪತ್ರಕ್ಕೆ ಸಹಿಹಾಕಬೇಕಾಗಿದೆ.
ದಂಪತಿಗಳಿಗೆ ಕುಟುಂಬನಿಯಂತ್ರಣವನ್ನು ಕಾನೂನಿನಲ್ಲಿ ಅನುಮತಿಸಲಾಗಿದೆ.ದಂಪತಿಗಳ ಸಮ್ಮತಿಯಿಂದ ಮಾತ್ರವೇ ಇದು ನಡೆಯಬೇಕಿದೆ. ಗರ್ಭಧಾರಣೆ, ಹೆರಿಗೆ ತಾಯಿಯ ಜೀವಕ್ಕೆ ಬೆದರಿಕೆಯಾಗಿ ಪರಿಣಮಿಸಿದ್ದರೆ ಮೂವರು ತಜ್ಞ ವೈದ್ಯರ ಅಭಿಪ್ರಾಯವಿದ್ದಾಗ ಮಾತ್ರವೇ ಗರ್ಭಪಾತ ಮಾಡಿಸಬಹುದಾಗಿದೆ. ಭ್ರೂಣಕ್ಕೆ ವೈಕಲ್ಯವಿದ್ದರೆ,ಸ್ತ್ರೀರೋಗ ತಜ್ಞ ವೈದ್ಯರು, ಮಕ್ಕಳ ತಜ್ಞ ವೈದ್ಯರು, ವೈದ್ಯಕೀಯ ಕಲ್ಪನಾ ತಜ್ಞರ ಮೂಲಕ ತಿಳಿಸಬೇಕಾಗಿದೆ. ಗರ್ಭಕ್ಕೆ 120 ದಿವಸ ಆಗುವ ಮೊದಲೇ ಗರ್ಭಪಾತಕ್ಕೆ ದಂಪತಿಗಳು ಅರ್ಜಿಸಲ್ಲಿಸಬೇಕಾಗಿದೆ.
ವೈದ್ಯರ ಸಲಹೆ ಪಾಲಿಸದೆ, ಔಷಧ ಸೇವಿಸಲು ನಿರಾಕರಿಸಿ ರೋಗಿಗೆ ಆಗುವ ಅಪಾಯವಾಗಿದ್ದರೆ ಇದಕ್ಕೆ ವೈದ್ಯರು ಜವಾಬ್ದಾರರಲ್ಲ ಎಂದು ಕಾನೂನು ತಿಳಿಸಿದೆ. ಅಂಗೀಕೃತ ವೈದ್ಯಕೀಯ ಮಾನದಂಡಗಳು ಮತ್ತು ಕಾನೂನುಗಳಪ್ರಕಾರವೇ ಚಿಕಿತ್ಸೆ ಮತ್ತು ಚಿಕಿತ್ಸಾ ರೀತಿ ಇದ್ದರೆ ವೈದ್ಯರು ಕಾನೂನು ಕ್ರಮ ಎದುರಿಸಬೇಕಾಗಿಲ್ಲ. ತಕ್ಷಣ ಚಿಕಿತ್ಸೆ ಆವಶ್ಯಕ ಮತ್ತು ರೋಗಿ ಅನುಮತಿ ನೀಡುವ ಸ್ಥಿತಿಯಲ್ಲಿಲ್ಲದಿದ್ದರೆ ಮಾತ್ರ ವೈದ್ಯರು ತಾವೇ ಸ್ವಯಂ ಮುಂದಾಗಬಹುದು. ಅದಲ್ಲದಿದ್ದರೆ ರೋಗಿಯ ಸಮ್ಮತಿಯಿಲ್ಲದೆ ವೈದ್ಯರು ಚಿಕಿತ್ಸೆ ನೀಡಬಾರದು. ರೋಗಿಯ ರಹಸ್ಯವನ್ನು ವೈದ್ಯರು ಬಹಿರಂಗೊಳಿಸಬಾರದು ಎಂದು ಕಾನೂನಿನಲ್ಲಿ ವಿವರಿಸಲಾಗಿದೆ.