ಸೌದಿ ಗ್ರ್ಯಾಂಡ್ ಮುಫ್ತಿಗೆ ಕಡ್ಡಾಯ ನಿವೃತ್ತಿ ನೀಡಿದರೆ ಕಿಂಗ್ ಸಲ್ಮಾನ್ ?
ರಿಯಾದ್ , ಸೆ.13 : ಸೌದಿ ಅರೇಬಿಯಾದ ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲ್ ಅಝೀಝ್ ಅಲ್ ಶೇಖ್ ಅವರಿಗೆ ' ಕಡ್ಡಾಯ ನಿವೃತ್ತಿ' ನೀಡಲಾಗಿರುವ ಸಾಧ್ಯತೆ ಇದೆ ಎಂದು ಲಂಡನ್ ಮೂಲದ ರಯ್ ಅಲ್ ಯಾವುಮ್ ಪತ್ರಿಕೆಯನ್ನು ಉಲ್ಲೇಖಿಸಿ ಪ್ರೆಸ್ ಟಿವಿ. ಕಾಮ್ ವೆಬ್ ಸೈಟ್ ವರದಿ ಮಾಡಿದೆ. "ಇರಾನಿಯನ್ನರು ಮುಸ್ಲಿಮರಲ್ಲ" ಎಂದು ಇತ್ತೀಚಿಗೆ ಅವರು ನೀಡಿರುವ ಹೇಳಿಕೆಯಿಂದ ಉಂಟಾಗಿರುವ ವಿವಾದವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಈ ವರ್ಷದ ಹಜ್ ಪ್ರವಚನವನ್ನು ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲ್ ಅಝೀಝ್ ಅವರು ನೀಡುವುದಿಲ್ಲ ಎಂದು ಸೌದಿ ಅಧಿಕೃತ ಮಾಧ್ಯಮಗಳು ಶನಿವಾರ ಹೇಳಿದ್ದವು. 1981 ರಿಂದ ಸತತವಾಗಿ ಹಜ್ ಪ್ರವಚನ ನೀಡುತ್ತಿದ್ದ ಅವರು ಈ ವರ್ಷ ನೀಡದೆ ಇರಲು ಕಾರಣವೇನು ಎಂದು ಅಧಿಕೃತ ಪ್ರಕಟಣೆ ನೀಡಲಾಗಿರಲಿಲ್ಲ. ವೃದ್ಧಾಪ್ಯ ಸಂಬಂಧಿ ಅನಾರೋಗ್ಯದಿಂದಾಗಿ ಅವರು ಈ ಬಾರಿ ಬರುತ್ತಿಲ್ಲ ಎಂದು ಹೇಳಲಾಗಿತ್ತು.
ಆದರೆ ಇರಾನಿಯನ್ನರ ಕುರಿತ ಅವರ ಹೇಳಿಕೆ ಸೌದಿ ನಾಗರೀಕರಲ್ಲಿ ಹಾಗು ಆಡಳಿತ ವರ್ಗದ ಕೆಲವರಲ್ಲಿ ಉಂಟು ಮಾಡಿದ್ದ ಅಸಮಾಧಾನವೇ ಇದಕ್ಕೆ ಕಾರಣ ಎಂದು ರಯ್ ಅಲ್ ಯಾವುಮ್ ವರದಿ ಮಾಡಿದೆ. ರವಿವಾರ ಶೇಖ್ ಅಬ್ದುಲ್ ರಹ್ಮಾನ್ ಅಲ್ ಸುದೈಸ್ ಅವರು ಹಜ್ ಪ್ರವಚನ ನೀಡಿದರು.
ಇರಾನ್ ಕುರಿತ ಹೇಳಿಕೆಯಿಂದ ಉಂಟಾಗಿರುವ ವಿವಾದವನ್ನು ತಣಿಸಲು ಖುದ್ದು ಸೌದಿ ದೊರೆ ಸಲ್ಮಾನ್ ಅವರೇ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗಿದೆ. ಸುದೈಸ್ ಅವರು ರವಿವಾರ 35 ವರ್ಷಗಳ ಹಜ್ ಪ್ರವಚನ ನೀಡಿರುವುದಕ್ಕೆ ಗ್ರ್ಯಾಂಡ್ ಮುಫ್ತಿ ಅವರಿಗೆ ಅಧಿಕೃತವಾಗಿ ಧನ್ಯವಾದ ಸಲ್ಲಿಸಿರುವುದು ಅವರಿಗೆ ನಿವೃತ್ತಿ ನೀಡಲಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ ಎಂದೂ ವಿಶ್ಲೇಷಿಸಲಾಗುತ್ತಿದೆ.