ವಿಶ್ವದ ಅತಿದೊಡ್ಡ ಒಳಾಂಗಣ ಥೀಮ್ ಪಾರ್ಕ್
ಬೈ, ಸೆ.16: ದುಬೈ ನಗರಿಯಲ್ಲಿ ಹೊಸದಾಗಿ ತೆರೆದಿರುವ ವಿಶ್ವದ ಅತಿ ದೊಡ್ಡ ಒಳಾಂಗಣ ಥೀಮ್ ಪಾರ್ಕ್ -ಐಎಂಜಿ ವರ್ಲ್ಡ್ಸ್ ಆಫ್ ಎಡ್ವೆಂಚರ್, ಭಾರೀ ಜನಸಂದಣಿಯನ್ನು ಆಕರ್ಷಿಸುತ್ತಿದ್ದು ಈದುಲ್ ಅಝಾದ ರಜಾ ಸಂದರ್ಭ ಒಂದು ಲಕ್ಷಕ್ಕೂ ಅಧಿಕ ಮಂದಿ ಈ 1.5 ಮಿಲಿಯನ್ ಚದರ ಅಡಿ ವಿಸ್ತಾರದ ಮನರಂಜನಾ ತಾಣಕ್ಕೆ ಭೇಟಿ ನೀಡಿ ಅನಂದಿಸಿದ್ದಾರೆ.
ಈದ್ ರಜಾದಂದು ಕೆಲ ಹೆಚ್ಚುವರಿ ಕಾರ್ಯಕ್ರಮಗಳಾದ ನೃತ್ಯ ಪ್ರದರ್ಶನಗಳು, ಮ್ಯಾಜಿಕ್ ಶೋಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ಅಲ್ಲಿಗೆ ಭೇಟಿ ನೀಡಿದವರಿಗೆ ಭಾರೀ ಮನರಂಜನೆ ನೀಡಿದವು. ಪ್ರತಿ ದಿನ ಈ ಥೀಮ್ ಪಾರ್ಕ್ ಗೆ ಸರಾಸರಿ 30,000 ಮಂದಿ ಭೇಟಿ ನೀಡುತ್ತಾರೆ. ಮುಂದಿನ ಒಂದು ವರ್ಷದೊಳಗಾಗಿ 4.5 ಮಿಲಿಯನ್ ಜನರು ಇಲ್ಲಿಗೆ ಭೇಟಿ ನೀಡುವ ವಿಶ್ವಾಸ ಈ ಥೀಮ್ ಪಾರ್ಕ್ ಆಯೋಜಕರಿಗಿದೆ.
ಕಾರ್ಟೂನ್ ನೆಟ್ ವರ್ಕ್ ಹಾಗೂ ಮಾರ್ವೆಲ್ ನ ಪ್ರಮುಖ ಪಾತ್ರಧಾರಿಗಳು, ಸೂಪರ್ ಹೀರೋಗಳು ತಮ್ಮ ಚಮತ್ಕಾರಗಳಿಂದ ಜನರನ್ನು ರಂಜಿಸಿದರೆ, ಲಾಸ್ಟ್ ವ್ಯಾಲಿಯಲ್ಲಿ ಡೈನಾಸರ್ ಗಳನ್ನು ಮನತಣಿಯೆ ನೋಡಬಹುದು. ಈ ಥೀಮ್ ಪಾರ್ಕ್ ನಲ್ಲಿ 25 ಮೂಲ ರಿಟೇಲ್ ಸ್ಟೋರ್ ಹಾಗೂ ಪಾನೀಯ ಮಾರಾಟ ಮಳಿಗೆಗಳಿವೆ.
ಈ ಥೀಮ್ ಪಾರ್ಕ್ ಸಂಯುಕ್ತ ಅರಬ್ ರಾಷ್ಟ್ರವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆಯೆಂದು ಹೇಳಲಾಗುತ್ತಿದೆ. ಈ ಹೊಸ ಥೀಮ್ ಪಾರ್ಕಿಗೆ ಭೇಟಿ ನೀಡ ಬಯಸುವವರು ಟಿಕೆಟ್ ಗಳನ್ನು ಐಎಂಜಿ ವರ್ಲ್ಡ್ ವೆಬ್ ಸೈಟ್ ಮುಖಾಂತರ ವಯಸ್ಕರಿಗೆ 300 ದಿರ್ಹಮ್ಸ್ ಹಾಗೂ ಮಕ್ಕಳಿಗೆ 250 ದಿರ್ಹಮ್ಸ್ ಕೊಟ್ಟು ಖರೀದಿಸಬಹುದು.
ಸತತ ಎರಡು ದಿನ ಈ ಥೀಮ್ ಪಾರ್ಕಿಗೆ ಭೇಟಿ ನೀಡಬಯಸುವ ವಯಸ್ಕರು ಹಾಗೂ ಮಕ್ಕಳು ಕ್ರಮವಾಗಿ 500 ಹಾಗೂ 400 ದಿರ್ಹಮ್ಸ್ ಪಾವತಿಸಬೇಕು. ವಾರ್ಷಿಕ ಟಿಕೆಟ್ ದರ 2,495 ದಿರಮ್ಸ್ ಆಗಿದೆ. ಟಿಕೆಟ್ ದರವು 20 ರೈಡ್ ಗಳು, ಲೈವ್ ಶೋಗಳು ಹಾಗೂ 5ಡಿ ಸಿನೆಮಾಗೆ ಪ್ರವೇಶ ನೀಡುವುದು. 12 ಪರದೆಯ ನೋವೋ ಸಿನೆಮಾ ಕೂಡ ಇಲ್ಲಿ ಸದ್ಯದಲ್ಲಿಯೇ ತೆರೆಯಲಿದೆ.