ಪಾಸ್ ಪೋರ್ಟ್ ವಾಪಸ್ ಬೇಕಿದ್ದರೆ ಬಾಕಿ ವೇತನ ಮರೆತುಬಿಡಿ: ಸೌದಿ ಕಂಪೆನಿ

Update: 2016-09-27 08:32 GMT

ರಿಯಾದ್, ಸೆ.27: ಸೌದಿ ಅರೆಬಿಯದ ಪ್ರಮುಖ ನಿರ್ಮಾಣ ಸಂಸ್ಥೆ ಯುನೈಟೆಡ್ ಸೀಮ್ಯಾಕ್ನ ನೂರಾರು ವಲಸಿಗ ಕಾರ್ಮಿಕರು ಕಳೆದ ಹಲವಾರು ತಿಂಗಳುಗಳಿಂದ ವೇತನ ದೊರೆಯದೆ ಸಂಕಷ್ಟಕ್ಕೀಡಾಗಿದ್ದು, ಇದೀಗ ಸಂಸ್ಥೆ ಕಾರ್ಮಿಕರ ಇಚ್ಛೆಯಂತೆ ಅವರ ಪಾಸ್ ಪೋರ್ಟ್ ಹಿಂದಿರುಗಿಸಲು ಒಪ್ಪಿದೆಯಾದರೂ ಅದಕ್ಕೊಂದು ಷರತ್ತು ವಿಧಿಸಿದೆ. ತಮಗೆ ಕಂಪೆನಿಯಿಂದ ಯಾವುದೇ ಹಣ ನೀಡಲು ಬಾಕಿಯಿಲ್ಲವೆಂದು ಲಿಖಿತವಾಗಿ ನೀಡಿದರೆ ಮಾತ್ರ ಪಾಸ್ ಪೋರ್ಟ್ ಹಿಂದಿರುಗಿಸುವುದಾಗಿ ಕಂಪೆನಿ ಹೇಳಿದೆಯೆಂದು ತಿಳಿದು ಬಂದಿದೆ.

ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೈನ್ಸ್ನ ನೂರಾರು ಕಾರ್ಮಿಕರು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 500 ಕ್ಕೂ ಮಿಕ್ಕಿ ಕಾರ್ಮಿಕರಿಗೆ ಕಳೆದ ಆರು ತಿಂಗಳುಗಳಿಂದ ಕನಿಷ್ಠ ವೇತನವನ್ನೂ ಪಾವತಿಸಿಲ್ಲ. ಅವರಲ್ಲಿ ಕೆಲವರಿಗೆ ಕಳೆದ 20 ತಿಂಗಳಿಂದಲೂ ವೇತನ ದೊರೆತಿಲ್ಲವೆನ್ನಲಾಗಿದೆ. ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿರುವ ಈ ಕಾರ್ಮಿಕರು ಹಾಗೂ ಅವರನ್ನೇ ನಂಬಿರುವ ಅವರ ಕುಟುಂಬಗಳು ಈಗ ಮತ್ತೆ ತಮಗೆ ದೊರೆಯಬೇಕಾದ ವೇತನವನ್ನು ಕಂಪೆನಿ ಹೇಳಿದಂತೆ ಮರೆತು ಬಿಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.

ತೈಲ ಬೆಲೆ ಕುಸಿತದಿಂದ ಸೌದಿ ಅರೇಬಿಯಾ ಈಗಾಗಲೇ ತೀವ್ರ ಸಮಸ್ಯೆಯೆದುರಿಸುತ್ತಿದೆ. ತನಗೆ ಸರಕಾರದಿಂದ ಅದರ ಯೋಜನೆಗಳನ್ನು ನಿರ್ವಹಿಸಿದ ವೆಚ್ಚದ ಹಣ ಇನ್ನೂ ಪಾವತಿಯಾಗಿಲ್ಲವೆಂಬ ಸಬೂಬನ್ನು ಸೀಮ್ಯಾಕ್ ಕಂಪೆನಿ ನೀಡುತ್ತಿದೆ.

ಸೌದಿ ಸರಕಾರ ಯಾ ತಮ್ಮ ದೇಶದ ದೂತಾವಾಸ ಕಚೇರಿಗಳು ತಮ್ಮ ಸಹಾಯಕ್ಕೆ ಬರುತ್ತಿಲ್ಲವೆಂದು ಕಾರ್ಮಿಕರು ದೂರುತ್ತಿದ್ದಾರೆ. ಮೇಲಾಗಿ ಅವರ ಕೆಲಸದ ಪರ್ಮಿಟ್ ಅಥವಾ ಇಖಾಮಾ ಅವಧಿ ಕೂಡ ಮುಕ್ತಾಯವಾಗಿದ್ದು ಅವರ ಉದ್ಯೋಗದಾತ ಕಂಪೆನಿ ಅವುಗಳನ್ನು ನವೀಕರಿಸದ ಪರಿಣಾಮ ಕಾರ್ಮಿಕರು ಜೈಲು ಶಿಕ್ಷೆಗೊಳಗಾಗುವ ಯಾ ದೇಶದಿಂದ ಹೊರದಬ್ಬಲ್ಪಡುವ ಭಯ ಎದುರಿಸುತ್ತಿದ್ದಾರೆ.

ಸಂಕಷ್ಟಕ್ಕೀಡಾಗಿರುವ ಕಾರ್ಮಿಕರು ಕಾರ್ಮಿಕ ನ್ಯಾಯಾಲಯವೊಂದನ್ನು ಸಂಪರ್ಕಿಸಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಸೌದಿಯಲ್ಲಿ ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೈನ್ಸ್ ದೇಶಗಳ ಸುಮಾರು 30,000 ಕಾರ್ಮಿಕರಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News