ಡ್ರೋನ್ ಹಾರಾಟ: ದುಬೈ ವಿಮಾನ ನಿಲ್ದಾಣ ಒಂದು ಗಂಟೆ ಬಂದ್
Update: 2016-09-28 19:36 IST
ದುಬೈ, ಸೆ. 28: ಅನಧಿಕೃತ ಡ್ರೋನ್ ಹಾರಾಟದ ಹಿನ್ನೆಲೆಯಲ್ಲಿ, ಜಗತ್ತಿನ ಅತ್ಯಂತ ನಿಬಿಡ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬುಧವಾರ ಬೆಳಗ್ಗೆ ಸುಮಾರು 30 ನಿಮಿಷಗಳ ಕಾಲ ತನ್ನ ವಾಯು ಕ್ಷೇತ್ರವನ್ನು ಮುಚ್ಚಿತು. ಹಾಗಾಗಿ, ಸುಮಾರು ಒಂದು ಗಂಟೆ ಕಾಲ ವಿಮಾನಗಳ ಹಾರಾಟಕ್ಕೆ ತಡೆಯುಂಟಾಯಿತು.
ಸಮೀಪದಲ್ಲಿ ನಡೆಯುವ ಡ್ರೋನ್ ಹಾರಾಟದಿಂದಾಗಿ ಈ ವಿಮಾನ ನಿಲ್ದಾಣವು ತನ್ನ ವಾಯು ಕ್ಷೇತ್ರವನ್ನು ಮುಚ್ಚಿರುವುದು ಇತ್ತೀಚಿನ ತಿಂಗಳುಗಳಲ್ಲಿ ಇದು ಎರಡನೆ ಬಾರಿ.
‘‘ಸುರಕ್ಷತೆಯು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಯಾವುದೇ ವಿಮಾನ ನಿಲ್ದಾಣ ಅಥವಾ ಭೂಸ್ಪರ್ಶ ಸ್ಥಳದ 5 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಹಾರಾಟ ಚಟುವಟಿಕೆ ನಿಷಿದ್ಧವಾಗಿದೆ ಎಂಬುದನ್ನು ಎಲ್ಲ ಯುಎವಿ (ಮಾನವರಹಿತ ವಾಯು ವಾಹನ) ನಿರ್ವಾಹಕರಿಗೆ ನೆನಪಿಸಬಯಸುತ್ತೇವೆ’’ ಎಂದು ಸರಕಾರಿ ಒಡೆತನದ ದುಬೈ ಏರ್‌ಪೋರ್ಟ್ಸ್ ಟ್ವಿಟರ್‌ನಲ್ಲಿ ಹೇಳಿದೆ. ದುಬೈ ಏರ್‌ಪೋರ್ಟ್ಸ್ ದುಬೈಯ ಎರಡು ಪ್ರಮುಖ ವಿಮಾನ ನಿಲ್ದಾಣಗಳನ್ನು ನಡೆಸುತ್ತಿದೆ.