85ರ ವೃದ್ಧನಿಗೆ 15ರ ಬಾಲಕಿ ಜೊತೆ ವಿವಾಹವಾಯಿತೆ ?
ಜಿದ್ದಾ, ಅ.2:85 ವರ್ಷದ ವೃದ್ಧರೊಬ್ಬರ ಜೊತೆಗೆ 15 ವರ್ಷದ ಬಾಲಕಿಗೆ ವಿವಾಹವಾಗಿರುವ ಕುರಿತ ಆನ್‌ಲೈನ್ ವಿಡಿಯೊ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ವೈರಲ್ ಆಗಿ ಹರಿದಾಡುತ್ತಿವೆ.
ಸುಲೈಮಲ್ ಅಲ್ ರಶೀದಿ ಎಂಬ 85ರ ವೃದ್ಧರೊಬ್ಬರು 15 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾಗಿ ವೀಡಿಯೊ ಅಪ್‌ಲೋಡ್ ಮಾಡಿದ ವ್ಯಕ್ತಿ ಹೇಳಿಕೊಂಡಿದ್ದಾರೆ. ವಿವಾಹ ಸಮಾರಂಭ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆದಿದೆ. ವಿವಾಹ ವೆಚ್ಚವನ್ನು ಅತಿಥಿಗಳೇ ಪಾವತಿಸಿದ್ದಾರೆ ಎಂದು ವಿವರಿಸಿದ್ದಾರೆ.
ಆದರೆ ರಶೀದಿ ಅವರ ಪುತ್ರ, ತಮ್ಮ ತಂದೆಗೆ 74 ವರ್ಷ ವಯಸ್ಸಾಗಿದ್ದು, ವಧು ಅಪ್ರಾಪ್ತ ವಯಸ್ಕಳಲ್ಲ. ಮದುಮಗಳಿಗೆ 37 ವರ್ಷ ವಯಸ್ಸಾಗಿದೆ ಎಂದು ಹೇಳಿಕೊಂಡಿರುವುದನ್ನು ಹಲವು ಮಂದಿ ಷೇರ್ ಮಾಡಿದ್ದಾರೆ.
"ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹ ಮಾಡಿಕೊಡುವವರನ್ನು ಹಾಗೂ ವಿವಾಹವಾಗುವವರನ್ನು ಶಿಕ್ಷಿಸಬೇಕು. ಜೈಲಿಗೆ ತಳ್ಳಬೇಕು ಅಥವಾ ದಂಡ ವಿಧಿಸಬೇಕು" ಎಂದು ತಾರಿಖ್ ಅಲ್-ಒಮರಿ ಟ್ವೀಟ್ ಮಾಡಿದ್ದಾರೆ.
"ಮಹಿಳೆಯನ್ನು ಶೋಷಿಸುವ ಒಂದು ನಿದರ್ಶನ ಇದು. ಈ ವ್ಯಕ್ತಿಯ ವಯಸ್ಸು ಮದುಮಗಳಿಗಿಂತ 70 ವರ್ಷ ಅಧಿಕ" ಎಂದು ಹಲೀಮಾ ಮುಜಾಫರ್ ಟ್ವೀಟ್ ಮಾಡಿದ್ದಾರೆ. ಅಹ್ಮದ್ ಅಲ್-ಹಶ್ಮಿ "ಅವರು ನಿಮಗೆ ಸಾವಿನ ಶಿಕ್ಷೆ ನೀಡಿದ್ದಾರೆ. ಆತ ನಿಮ್ಮನ್ನು ಮಗಳು ಅಥವಾ ಸೇವಕಿ ಎಂದು ಕರೆಯುತ್ತಾರೆಯೇ ಎಂದು ಅಚ್ಚರಿಯಾಗುತ್ತಿದೆ" ಎಂದು ಹೇಳಿದ್ದಾರೆ.
"ಈ ವೀಡಿಯೊ 21ನೇ ಶತಮಾನದ ಮಹಿಳಾ ಶಿಶುಹತ್ಯೆಯ ಆಧುನಿಕ ಚಿತ್ರಣ" ಎಂದು ಹೇಬಾ ಮುಬಾರಕ್ ಪ್ರತಿಕ್ರಿಯಿಸಿದ್ದಾರೆ.