ವಿದೇಶಿಗಳನ್ನು ಬಂಧಿಸಿಟ್ಟು ಆಹಾರ ನೀಡದೆ ಕೊಂದ ಸೌದಿ ಪ್ರಜೆಗೆ ಗಲ್ಲು
ರಿಯಾದ್, ಅ.4: ಇತಿಯೋಫಿಯದ ಇಬ್ಬರನ್ನು ಬಂಧಿಸಿ ಆಹಾರ ನೀಡದೆ ಹಸಿದು ಸಾಯಲು ಕಾರಣನಾದ ಮನಾಹಿ ಮುಹಮ್ಮದ್ ಬಿನ್ ಮನಾಹಿ ಎಂಬ ಸ್ವದೇಶಿ ಪ್ರಜೆಗೆ ರಿಯಾದ್‌ನಲ್ಲಿ ಪಾಸಿಶಿಕ್ಷೆ ಜಾರಿಗೊಳಿಸಲಾಗಿದೆ ಎಂದು ಗೃಹಸಚಿವಾಲಯದ ಪ್ರಕಟನೆ ತಿಳಿಸಿದೆ ಎಂದು ವರದಿಯಾಗಿದೆ.
ಸ್ವದೇಶಿ ಪ್ರಜೆ ತನ್ನ ಕಾರಿನಲ್ಲಿ ಇತಿಯೋಫಿಯದ ಇಬ್ಬರು ವ್ಯಕ್ತಿಗಳನ್ನು ತಡೆದಿರಿಸಿ ಆಯುಧ ತೋರಿಸಿ ಬೆದರಿಸಿ ಬಂಧಿಸಿಟ್ಟು ಆಹಾರ ನೀರು ನೀಡದೆ ದೌರ್ಜನ್ಯ ವೆಸಗಿದ್ದ. ಅವರಿಬ್ಬರೂ ಮೃತರಾದ ಬಳಿಕ ಅವರ ಮೃತದೇಹಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಗೃಹಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಮಾದಕವಸ್ತು ಸೇವಿಸಿ ವಾಹನ ಚಲಾಯಿಸಿದ್ದ ಎಂದು ಸಚಿವಾಲಯ ತಿಳಿಸಿದೆ. ಪೊಲೀಸರಿಗೆ ಸೆರೆಸಿಕ್ಕ ನಂತರ ಆರೋಪಿಯನ್ನು ಪ್ರಶ್ನಿಸಿದಾಗ ಆತನೆಸಗಿದ ಅಪರಾಧ ಬೆಳಕಿಗೆ ಬಂದಿತ್ತು. ನಂತರ ಜನರಲ್ ಕೋರ್ಟಿನಲ್ಲಿ ಆತನ ಆರೋಪ ಸಾಬೀತಾಗಿದ್ದು, ಅದು ಪಾಸಿಶಿಕ್ಷೆ ವಿಧಿಸಿತ್ತು. ನಂತರ ಆತ ಅಪೀಲು ಕೋರ್ಟನ್ನು ಸಂಪರ್ಕಿಸಿದಾಗ ಅದು ಕೂಡಾ ಪಾಸಿಶಿಕ್ಷೆಯನ್ನು ದೃಢೀಕರಿಸಿತ್ತು. ನಂತರ ಕಾನೂನು ಪ್ರಕಾರ ಮುಂದುವರಿಯುವಂತೆ ದೊರೆಯ ಆದೇಶವೂ ಬಂದಿತ್ತು ಎಂದು ಗೃಹಸಚಿವಾಲಯ ತಿಳಿಸಿದೆ ಎಂದು ವರದಿಯಾಗಿದೆ.