ಸೌದಿ ಪ್ರಜೆಯನ್ನು ಮದುವೆಯಾಗುವ ವಲಸಿಗರು ಇನ್ನು ನಿರಾಳ
ಜಿದ್ದಾ, ಅ.5: ಸೌದಿ ಪ್ರಜೆಗಳನ್ನು ಮದುವೆಯಾಗುವ ವಲಸಿಗರು ಇನ್ನು ಮುಂದೆ ನಿರಾಳವಾಗಬಹುದಾದಂತಹ ಮಹತ್ವದ ಆದೇಶವನ್ನು ಸೌದಿ ಸರಕಾರ ಹೊರಡಿಸಿದೆ.
ಈ ಹಿಂದಿನ ಕಾನೂನಿನಂತೆ ಸೌದಿ ಪ್ರಜೆಯನ್ನು ಮದುವೆಯಾದ ವಲಸಿಗರ ವಿವಾಹ ಸಂಬಂಧದಲ್ಲಿ ಬಿರುಕೇನಾದರೂ ಉಂಟಾದಲ್ಲಿ ಅವರು ಸಂಪೂರ್ಣವಾಗಿತನ್ನ ಸೌದಿ ಪತಿ ಯಾ ಪತ್ನಿಯ ಹಿಡಿತದಲ್ಲಿರಬೇಕಾಗಿತ್ತು. ಇದಕ್ಕೆ ಕಾರಣವೂ ಇದೆ. ಇಂತಹ ಸನ್ನಿವೇಶಗಳಲ್ಲಿ ಸೌದಿಗಳು ಆಂತರಿಕ ವ್ಯವಹಾರಗಳ ಸಚಿವಾಲಯದ ವ್ಯವಸ್ಥೆಯೊಂದರಂತೆ ಫೈನಲ್ ಎಕ್ಸಿಟ್ ವೀಸಾ ಬಟನ್ ಒತ್ತಿದರಷ್ಟೇ ಸಾಕು. ವಲಸಿಗರು ಅಲ್ಲಿ ವಾಸಿಸುವ ಎಲ್ಲಾ ಹಕ್ಕುಗಳನ್ನೂ ಕಳೆದುಕೊಂಡು ಬಿಡುತ್ತಿದ್ದರು.
ಆದರೆ ಮಂಗಳವಾರದ ಆದೇಶದಂತೆ, ಸೌದಿಗಳು ತಮ್ಮ ವಲಸಿಗ ಪತಿ ಯಾ ಪತ್ನಿಗೆ ಬಲವಂತವಾಗಿ ಎಕ್ಸಿಟ್ ವೀಸಾ ನೀಡುವಂತಿಲ್ಲ. ಹೊಸ ಕಾನೂನಿನಂತೆ ಸೌದಿಯೇತರರು ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಸೌದಿಯಲ್ಲಿಯೇ ನೆಲೆಸಬಹುದಾಗಿದೆ
ನ್ಯಾಯ ಸಚಿವಾಲಯ ಹಾಗೂ ಪಾಸ್ ಪೋರ್ಟ್ ನಿರ್ದೇಶನಾಲಯ ನಡೆಸಿದ ಅಧ್ಯಯನವೊಂದರಂತೆ ಈ ಕ್ರಮ ಕೈಗೊಳ್ಳಲಾಗಿದೆ. ಈಗಿನ ನಿಯಮದಂತೆ ಪ್ರಕರಣ ಜಾರಿಯಲ್ಲಿರುವಾಗ ಸಂಬಂಧಿತರಿಗೆ ದೇಶದಿಂದ ಹೊರ ಹೋಗುವ ಆದೇಶ ಬಂದರೂ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳಲು ತಗಲುವ ಸಮಯವನ್ನು ಗಮನದಲ್ಲಿರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮೇಲಾಗಿ ಪ್ರಕರಣದ ಮುಂದಿನ ಹಂತವನ್ನು ಪರಾಮರ್ಶಿಸಲು ಸಂಬಂಧಿತರು ಮೂರನೇ ವ್ಯಕ್ತಿಗೆ ಪವರ್ ಆಫ್ ಅಟಾರ್ನಿ ಕೂಡ ನೀಡಬಹುದಾಗಿದೆ.
ಈ ಹೊಸ ನಿರ್ಧಾರ ವಲಸಿಗರ ಸಮುದಾಯದಲ್ಲಿ ಹರ್ಷ ಮೂಡಿಸಿದೆ. ಎಲ್ಲಾ ವಲಸಿಗರನ್ನೂ ದೇಶದಿಂದ ಹೊರಕಳುಹಿಸಬೇಕೆಂಬ ಬೇಡಿಕೆಯೊಂದಿಗೆ ಮೂಡಿ ಬಂದ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಒಂದು ವೈರಲ್ ಆಗಿದ್ದರೂ ಸೌದಿಗಳು ಈಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರಲ್ಲದೆ, ಇಂತಹ ಬೆಳವಣಿಗೆ ಸೌದಿಗಳು ಮತ್ತು ಅವರ ದೇಶದಲ್ಲಿರುವ ವಲಸಿಗರ ಸಂಬಂಧಗಳಲ್ಲಿ ಬಿರುಕು ಮೂಡಿಸುವುದು ಎಂದಿದ್ದಾರೆ.