ವಿಶ್ವದ ಅತ್ಯಂತ ಎತ್ತರದ ಕಟ್ಟಡ ಕಟ್ಟುವ ರೇಸಿನಲ್ಲಿ ಸೌದಿ, ಯುಎಇ
ದುಬೈ, ಅ.11: ವಿಶ್ವದ ಅತ್ಯಂತ ಎತ್ತರದ ಕಟ್ಟಡ ನಿರ್ಮಾಣ ಮಾಡುವ ರೇಸ್‌ನಲ್ಲಿ ಸಂಯುಕ್ತ ಅರಬ್ ಸಂಸ್ಥಾನದೊಂದಿಗೆ ಸೌದಿ ಅರೇಬಿಯವೂ ಸೇರಿಕೊಂಡಿದೆ. ದುಬೈಯಲ್ಲಿರುವ 828 ಮೀಟರ್ ಎತ್ತರದ ಬುರ್ಜ್ ಖಲೀಫಾ ವಿಶ್ವದ ಅತ್ಯಂತ ಎತ್ತರದ ಕಟ್ಟಡವೆಂದು ಇಲ್ಲಿಯ ತನಕ ತಿಳಿಯಲಾಗಿದ್ದರೆ, ಈಗ ಅದಕ್ಕೆ ಪ್ರತಿಸ್ಪರ್ಧೆ ನೀಡಲೆಂಬಂತೆ ದುಬೈಯಲ್ಲಿ ‘ದಿ ಟವರ್’ಗೆ ಶಿಲಾನ್ಯಾಸ ನೆರವೇರಿಸಲಾಗಿದೆ.
ಒಂದು ಬಿಲಿಯನ್ ಡಾಲರ್ ಮೊತ್ತದಲ್ಲಿ ತಲೆಯೆತ್ತಲಿರುವ ಈ ಟವರ್ ನಿರ್ಮಾಣ ಕಾರ್ಯವು 2020 ರಲ್ಲಿ ಸಂಪೂರ್ಣಗೊಳ್ಳಲಿದೆ. ಈ ಗಗನಚುಂಬಿಯ ನಿಖರ ಎತ್ತರದ ಬಗ್ಗೆ ಸದ್ಯ ಯಾವುದೇ ಮಾಹಿತಿಯಿಲ್ಲವಾದರೂ ಅದರ ನಿರ್ಮಾಣ ಕೈಗೆತ್ತಿಕೊಳ್ಳಲಿರುವ ಎಮಾರ್ ಪ್ರಾಪರ್ಟೀಸ್ ಮತ್ತು ದುಬೈ ಹೋಲ್ಡಿಂಗ್ ಪ್ರಕಾರ ಅವರು ವಿಶ್ವದ ಅತ್ಯಂತ ಎತ್ತರದ ಕಟ್ಟಡವನ್ನೂ ಮೀರಿಸುವ ನಿಟ್ಟಿನಲ್ಲಿ ಕಣ್ಣಿಟ್ಟಿದ್ದಾರೆ.
ಅತ್ತ ಸೌದಿ ಅರೇಬಿಯದಲ್ಲಿ ಕಿಂಗ್ ಡಮ್ ಹೋಲ್ಡಿಂಗ್ಸ್ 1000 ಮೀಟರ್ ಎತ್ತರದ ಕಟ್ಟಡ ಜಿದ್ದಾಟವರ್ಸ್‌ನ್ನು ನಿರ್ಮಿಸುವ ಯೋಜನೆಯಲ್ಲಿದೆ.
ತರುವಾಯ ದುಬೈಯಲ್ಲಿ ತಲೆಯೆತ್ತಲಿರುವ ದಿ ಟವರ್ ದುಬೈ ಕ್ರೀಕ್ ಹಾರ್ಬರ್ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು ರಿಟೇಲ್ ಮಳಿಗೆಗಳ ಸಮೂಹವೇ ಇಲ್ಲಿ ಕಾಲೂರಲಿದೆಯೆಂದು ಹೇಳಲಾಗಿದೆ. ಮೂಲಗಳ ಪ್ರಕಾರ ಈ ಟವರ್ ಎತ್ತರ ಬುರ್ಜ್ ಖಲೀಫಾಗಿಂತಲೂ 100 ಮೀಟರ್ ಅಧಿಕ ಎತ್ತರವಿರಲಿದೆೆ.
ಮೊದಲಿಗೆ ಬುರ್ಜ್ ಅಲ್ ಅರಬ್ ಕಟ್ಟಡವಿದ್ದರೆ, ನಂತರ ಬಂದ ಎಮಿರೇಟ್ಸ್ ಟವರ್ಸ್, ಬುರ್ಜ್ ಖಲೀಫಾ, ಹಾಗೂ ದಿ ಟವರ್ ಅತ್ಯಾಧುನಿಕವಾಗಿ ನವೀನ ವಿನ್ಯಾಸದೊಂದಿಗೆ ನಿರ್ಮಾಣಗೊಳ್ಳಲಿದೆ.
ದುಬೈ ದೊರೆ ಶೇಖ್ ಸುಲ್ತಾನ್ ಅವರ ಕನಸಿನ ಸ್ಮಾರ್ಟ್ ಸಿಟಿಯಂತೆಯೇ ಅದು ನಿರ್ಮಾಣಗೊಳ್ಳಲಿದ್ದು ಡಿಜಿಟಲ್ ಫೀಚರ್ಸ್ ಒಳಗೊಂಡಿರುತ್ತದೆ ಹಾಗೂ ಮುಂದಿನ ಜನಾಂಗದ ಜನಪ್ರಿಯ ತಾಣವಾಗಲಿದೆಯೆಂಬ ನಿರೀಕ್ಷೆಯಿದೆ.
‘ದಿ ಟವರ್’ ವಿನ್ಯಾಸವನ್ನು ಸ್ಯಾಂಟಿಯಾಗೋ ಕಲತ್ರವಾ ವಾಲ್ಸ್ ಮಾಡಿದ್ದು ವಿಭಿನ್ನವಾಗಿ ಅದು ಮೂಡಿ ಬರಲಿದೆ. ಈ ಕಟ್ಟಡದಲ್ಲಿ ಅತ್ಯಾಧುನಿಕ ಹೊಟೇಲ್, ದಿ ಪಿನ್ನ್ಯಾಕಲ್ ರೂಂ, ಒಬ್ಸರ್ವೇಶನ್ ಡೆಕ್ ಮುಂತಾದವುಗಳಿರುತ್ತವೆ. ಈ ಟವರ್ ಮೂವ್ ಮೆಂಟ್ ಲೈಟಿಂಗ್‌ನ್ನು ಕೂಡ ಒಳಗೊಂಡಿರುತ್ತದೆ.