ದಾರುಲ್ ಇರ್ಶಾದ್ ರಿಯಾದ್ ಸಮಿತಿ ವತಿಯಿಂದ ಶೈಖುನಾ ಅಬ್ದುಲ್ ಮುಸ್ಲಿಯಾರ್ ರಿಗೆ ಸನ್ಮಾನ
ರಿಯಾದ್,ಅ.11: ದ.ಕ ಜಿಲ್ಲೆಯ ಪ್ರತಿಷ್ಠಿತ ಹಾಗೂ ಮೊಟ್ಟ ಮೊದಲ ಇಸ್ಲಾಮೀ ಸಮನ್ವಯ ಶಿಕ್ಷಣ ಸಂಸ್ಥೆ ''ದಾರುಲ್ ಇರ್ಶಾದ್ ಮಾಣಿ'' ಇದರ ಸಂಸ್ಥಾಪಕ, ಪ್ರಮುಖ ವಿದ್ವಾಂಸ, ಕರ್ನಾಟಕ ರಾಜ್ಯ ಜಂಇಯತುಲ್ ಉಲಮಾ ಉಪಾಧ್ಯಕ್ಷ, ಶೈಖುನಾ ಅಬ್ದುಲ್ ಮುಸ್ಲಿಯಾರ್ ರನ್ನು ದಾರುಲ್ ಇರ್ಶಾದ್ ರಿಯಾದ್ ಸಮಿತಿ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಇಲ್ಲಿನ ಕೆಸಿಎಫ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಉದ್ಘಾಟಿಸಿದರು. ದಾರುಲ್ ಇರ್ಶಾದ್ ಸೌದಿ ಕೇಂದ್ರೀಯ ಸಮಿತಿ ಅಧ್ಯಕ್ಷ ಇಸ್ಹಾಕ್ ಮೇದರಬೆಟ್ಟು ಅಧ್ಯಕ್ವತೆ ವಹಿಸಿದರು. ದಾರುಲ್ ಇರ್ಶಾದ್ ಉಪನ್ಯಾಸಕ ಬದ್ರುದ್ದೀನ್ ಅಹ್ಸನಿ ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ವೇಳೆ ಕೆಸಿಎಫ್ ರಿಯಾದ್ ಝೋನಲ್ ಹಾಗೂ ಓಲ್ಡ್ ಸನಯ್ಯಾ ಸೆಕ್ಟರ್ ಗಳ ವತಿಯಿಂದಲೂ ಶಾಲು ಹೊದಿಸಿ ಸನ್ಮಾನಿಸಲಾಯಿತು.
ದಾರುಲ್ ಇರ್ಶಾದ್ ರಿಯಾಧ್ ಘಟಕದ ಅಧ್ಯಕ್ಷ ಇಸ್ಮಾಈಲ್ ಜೋಗಿಬೆಟ್ಟು, ಡಿಕೆಎಸ್ಸಿ ಸೌದಿ ಕೇಂದ್ರೀಯ ಸಮಿತಿ ಕೋಶಾಧಿಕಾರಿ ಹಮೀದ್ ಸುಳ್ಯ, ಹಿರಿಯ ಮುಖಂಡ ಇಸ್ಮಾಈಲ್ ಶಾಫಿ ವಿಟ್ಲ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರಾರ್ಪಣೆ ಸ್ವೀಕರಿಸಿ ಮಾತನಾಡಿದ ಹಮೀದ್ ಮುಸ್ಲಿಯಾರ್, ಜಿಲ್ಲೆಯ ಬಡ ಹಾಗೂ ನಿರ್ಗತಿಗ ವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಮನ್ವಯ ಶಿಕ್ಷಣ ಒದಗಿಸುವ ಉದ್ದೇಶದಿಂದ ವರ್ಷಗಳ ಹಿಂದೆ ಸಣ್ಣ ಮಟ್ಟದಲ್ಲಿ ಆರಂಭಿಸಿದ ಪ್ರಾಥಮಿಕ ವಿದ್ಯಾ ಕೇಂದ್ರವಾದ ದಾರುಲ್ ಇರ್ಶಾದ್ ಇದೀಗ ಧಾರ್ಮಿಕ ಹಾಗೂ ಸಾರ್ವಜನಿಕ ಶಿಕ್ಷಣದಲ್ಲಿ ಸ್ನಾತಕ್ಕೋತ್ತರ ಪದವಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಈಯೆಲ್ಲ ಬೆಳವಣಿಗೆಗಳ ಹಿಂದೆ ಅನಿವಾಸಿ ಕನ್ನಡಿಗರಾದ ನಿಮ್ಮೆಲ್ಲರ ಹಿರಿದಾದ ಪ್ರಯತ್ನದ ಫಲವಿದೆ. ದುಡಿಮೆಯ ಒತ್ತಡಗಳ ನಡುವೆ ಶಿಕ್ಷಣವೂ ಸೇರಿದಂತೆ ಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಅನಿವಾಸಿಗಳಾದ ನೀವು ಮಾಡುತ್ತಿರುವ ಸೇವೆಗಳು ನಿಜಕ್ಕೂ ಪ್ರಶಂಸನೀಯ ಎಂದು ನುಡಿದರು. ''ಮುಹರ್ರಂ'' ಮಹತ್ವದ ಕುರಿತೂ ಈ ಸಂದರ್ಭ ಅವರು ಹಿತವಚನ ನೀಡಿದರು.
ಕೆಸಿಎಫ್ ಬತ್ತಾ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಲತೀಫಿ ಅರಂಭದಲ್ಲಿ ಕಿರಾಆತ್ ನಡೆಸಿದರು. ''ಗಲ್ಫ್ ಇಶಾರಾ'' ಟೀಂ ಸಂಚಾಲಕ ಮುಸ್ತಫಾ ಸಅದಿ ಸೂರಿಕುಮೇರು ಸ್ವಾಗತಿಸಿದರು. ದಾರುಲ್ ಇರ್ಶಾದ್ ಸಂಚಾಲಕ ಅಬ್ದುರ್ರಶೀದ್ ಮದನಿ ಕಾರ್ಯ ಕ್ರಮ ನಿರೂಪಿಸಿದರು. ದಾರುಲ್ ಇರ್ಶಾದ್ ರಿಯಾದ್ ಘಟಕದ ಕಾರ್ಯದರ್ಶಿ ಸಲೀಂ ಕನ್ಯಾಡಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.