ದುಬೈ ಎಕ್ಸ್ ಪೊ 2020 ದಿನಾಂಕ ಪ್ರಕಟ

Update: 2016-10-20 12:55 GMT

ಇಂದಿನಿಂದ ಸರಿಯಾಗಿ ನಾಲ್ಕು ವರ್ಷಗಳ ಬಳಿಕ, ಇದೇ ದಿನದಂದು ದುಬೈಯಲ್ಲಿ ‘ಎಕ್ಸ್‌ಪೊ 2020’ ಆರಂಭಗೊಳ್ಳಲಿದೆ.

ದುಬೈ, ಅ. 20: ಮುಂದಿನ ಜಾಗತಿಕ ವಸ್ತುಪ್ರದರ್ಶನವು ದುಬೈಯಲ್ಲಿ 2020 ಅಕ್ಟೋಬರ್ ಮತ್ತು ಎಪ್ರಿಲ್ 2021ರ ನಡುವೆ ನಡೆಯಲಿದೆ.

‘ಕನೆಕ್ಟಿಂಗ್ ಮೈಂಡ್ಸ್, ಕ್ರಿಯೇಟಿಂಗ್ ಫ್ಯೂಚರ್’ (ಮನಸ್ಸುಗಳನ್ನು ಜೋಡಿಸುತ್ತಾ ಭವಿಷ್ಯದ ಸೃಷ್ಟಿ) ಎಂಬ ಧ್ಯೇಯ ವಾಕ್ಯದ ಬೃಹತ್ ಪ್ರದರ್ಶನವು ಭೂಮಿಯ ಮೇಲಿನ ಬೃಹತ್ ಪ್ರದರ್ಶನಗಳ ಪೈಕಿ ಒಂದಾಗಲಿದೆ. ಈ ಅಂತಾರಾಷ್ಟ್ರೀಯ ಸಮಾವೇಶದಲ್ಲಿ 180ಕ್ಕೂ ಅಧಿಕ ದೇಶಗಳು ಭಾಗವಹಿಸಲಿವೆ ಹಾಗೂ 2.5 ಕೋಟಿಗೂ ಅಧಿಕ ಜಾಗತಿಕ ಸಂದರ್ಶಕರನ್ನು ಸೆಳೆಯಲಿದೆ.

ದುಬೈ ಎಕ್ಸ್‌ಪೊ 2020ದಿಂದ ಏನನ್ನು ನಿರೀಕ್ಷಿಸಬಹುದು?

ಎಕ್ಸ್‌ಪೊ 2020 ಜಾಗತಿಕ ಜನಮಾನಸದ ಮೇಲೆ ಶಾಶ್ವತ ಪರಿಣಾಮವನ್ನು ಬೀರಲಿದೆ.

ಪ್ರದರ್ಶನದಲ್ಲಿ ಭಾಗವಹಿಸಿದವರು ಮತ್ತು ಸಂದರ್ಶಕರಿಗೆ ಇದು ಖಾಯಂ ಪ್ರಯೋಜನಗಳನ್ನು ಒದಗಿಸಲಿದೆ. ಅದೂ ಅಲ್ಲದೆ, ಯುಎಇಯ ಸಮೃದ್ಧಿ ಹಾಗೂ ಪ್ರತಿಷ್ಠೆ, ವಾಣಿಜ್ಯ, ಜ್ಞಾನ ಸೃಷ್ಟಿ ಮತ್ತು ವಿಸ್ತೃತ ವಲಯಕ್ಕಾಗಿ ಹಲವಾರು ದೇಣಿಗೆಗಳನ್ನು ನೀಡಲಿದೆ.

ದುಬೈಯ ನಾಲ್ಕು ನೂತನ ಯೋಜನೆಗಳು ವಸ್ತುಪ್ರದರ್ಶನದ ರಂಗನ್ನು ಹೆಚ್ಚಿಸಲಿವೆ.

ಅಲಾದೀನ್ ಸಿಟಿ

ದುಬೈ ಕ್ರೀಕ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಲಾದೀನ್ ಸಿಟಿ, ಅಲಾದೀನ್ ಮತ್ತು ಸಿಂದ್‌ಬಾದ್‌ನ ಕತೆಗಳಿಂದ ಪ್ರೇರಿತ ಆತಿಥ್ಯ ಯೋಜನೆಯಾಗಿದೆ.

ಡೇರಾ ಐಲ್ಯಾಂಡ್ಸ್

ನಖೀಲ್‌ನಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆ ‘ಡೇರಾ ಐಲ್ಯಾಂಡ್ಸ್’ ವಲಯದ ಹಾಲಿ ವಾತಾವರಣಕ್ಕೆ ಅರೇಬಿಯನ್ ಸಂಸ್ಕೃತಿಯ ಅನನ್ಯ ಸ್ಪರ್ಶ ನೀಡುತ್ತದೆ. ಈ ಯೋಜನೆಯಲ್ಲಿ ನಾಲ್ಕು ಮಾನವ ನಿರ್ಮಿತ ದ್ವೀಪಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ದ್ವೀಪಗಳಿಗೆ ಸಾಂಪ್ರದಾಯಿಕ ಎಮಿರಾಟಿ ದೋಣಿಗಳ ಮೂಲಕ ಹೋಗಬಹುದಾಗಿದೆ.

ಜುಯಲ್ ಆಫ್ ಕ್ರೀಕ್

ದುಬೈ ಕ್ರೀಕ್‌ನಲ್ಲಿ ‘ಜುಯಲ್ ಆಫ್ ದ ಕ್ರೀಕ್’ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ದುಬೈ ಇಂಟರ್‌ನ್ಯಾಶನಲ್ ರಿಯಲ್ ಎಸ್ಟೇಟ್ ಘೋಷಿಸಿದೆ.

ಯೋಜನೆಯು ಐದು ಆತಿಥ್ಯ ಕಟ್ಟಡಗಳು, ಸರ್ವಿಸ್ಡ್ ಅಪಾರ್ಟ್‌ಮೆಂಟ್‌ಗಳಿರುವ ಒಂದು ಹೊಟೇಲ್ ಮತ್ತು ಒಂದು ಅಟ್ಯಾಚ್ಡ್ ಕೆಫೆ ಇರುವ ಬಾಲ್‌ರೂಮ್ ಹೊಂದಿರುತ್ತದೆ. ಇಲ್ಲಿ ವಿವಿಧ ರೀತಿಯ ಸಸ್ಯರಾಶಿಗಳು ಮತ್ತು ಅವುಗಳಿಗೆ ಹೊಂದಿಕೊಳ್ಳುವ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಯೋಜನೆ ಪೂರ್ಣಗೊಂಡಾಗ ಒಂದು ವಾಹನ ಸೇತುವೆ, ನಾಲ್ಕು ಕಾಲ್ನಡಿಗೆ ಸೇತುವೆಗಳು ಮತ್ತು ಒಂದು ಮರೀನಾವೂ ಸಿದ್ಧವಾಗಿರುತ್ತದೆ.

ದುಬೈ ವಾಟರ್ ಕ್ಯಾನಲ್

ದುಬೈಯಲ್ಲಿ ತಲೆಯೆತ್ತುತ್ತಿರುವ ನೂತನ ಯೋಜನೆಗಳಿಗೆ ಹೊಸ ಮೆರುಗು ತರುತ್ತಿರುವುದೇ ದುಬೈ ವಾಟರ್ ಕ್ಯಾನಲ್ (ನೀರುಗಾಲುವೆ). ದುಬೈ ಕ್ರೀಕ್‌ನಿಂದ ಆರಂಭಿಸಿ ಅಲ್ ಸಫಾ ಪಾರ್ಕ್ ಮತ್ತು ಜುಮೈರಾಹ್ ಮೂಲಕ ಹಾದು ಬೀಚ್‌ನತ್ತ ಸಾಗುವ ‘ದುಬೈ ವಾಟರ್ ಕ್ಯಾನಲ್’ ಪೂರ್ಣಗೊಳ್ಳುವತ್ತ ಸಾಗುತ್ತಿದೆ.

ಕೆಲವು ಯುವಕರಿಗೆ ಎಕ್ಸ್‌ಪೊ 2020 ಅವರ ವೃತ್ತಿಬದುಕಿನ ಆರಂಭವಾಗಿದೆ. 27 ಯುವ ಜನರಿಗೆ ತರಬೇತಿ ನೀಡುವ ಕಾರ್ಯಕ್ರಮ ‘ದಿ ಎಕ್ಸ್‌ಪೊ 2020 ಅಪ್ರೆಂಟಿಸ್ ಪ್ರೋಗ್ರಾಮ್’ ದುಬೈ ಸೌತ್‌ನಲ್ಲಿರುವ ದುಬೈ ಸೈಟ್ ಕಚೇರಿಯಲ್ಲಿ ಈಗಾಗಲೇ ಅಧಿಕೃತವಾಗಿ ಆರಂಭಗೊಂಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News