ದುಬೈ: ಆರು ಮುಕ್ಕಾಲು ಕೋಟಿ ರೂ. ಬಹುಮಾನ ಗೆದ್ದ ಭಾರತೀಯ ಮಹಿಳೆ
ದುಬೈ,ಅ.22: ತಾನು 6.75 ಕೋಟಿ ರೂ. ಮೊತ್ತದ ಬಹುಮಾನ ಗೆದ್ದಿದ್ದೇನೆಂಬ ದೂರವಾಣಿ ಕರೆಬಂದಾಗ 50ರ ಹರೆಯದ ಭಾರತೀಯ ಮಹಿಳೆ, ಎಸ್.ಜೆ.ಫೆರ್ನಾಂಡಿಸ್‌ಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಆದರೆ ಅದು ಸತ್ಯವೆಂದು ಅರಿವಾದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಹೌದು. ಎಸ್.ಜೆ.ಫೆರ್ನಾಂಡಿಸ್ ಆನ್‌ಲೈನ್ ಮೂಲಕ ಖರೀದಿಸಿದ್ದ ದುಬೈ ಡ್ಯೂಟಿ ಫ್ರೀ‘ಮಿಲೆನಿಯಂ ಮಿಲಿಯನೇರ್’ ಬಹುಮಾನ ಡ್ರಾದಲ್ಲಿ ಅವರಿಗೆ 1 ಮಿಲಿಯ ಡಾಲರ್ (ಸುಮಾರು 6.75 ಕೋಟಿ ರೂ.) ಬಹುಮಾನ ಒಲಿದುಬಂದಿತ್ತು. ಅವರು ಆಗಸ್ಟ್ 24ರಂದು ಆನ್‌ಲೈನ್‌ನಲ್ಲಿ 225 ಸಿರೀಸ್‌ನ ಟಿಕೆಟ್ ಸಂಖ್ಯೆ 3161 ಅನ್ನು ಖರೀದಿಸಿದ್ದರು. ಅಕ್ಟೋಬರ್ 4ರಂದು ನಡೆದ ಡ್ರಾದಲ್ಲಿ ಈ ಸಂಖ್ಯೆಗೆ 1ಮಿಲಿಯ ಡಾಲರ್ ಬಹುಮಾನ ಬಂದಿದೆ.
ಅಕೌಂಟೆಂಟ್ ಆಗಿರುವ ಎಸ್.ಜೆ. ಫೆರ್ನಾಂಡಿಸ್ ಅವರು 16 ವರ್ಷಗಳ ಕಾಲ ದುಬೈನಲ್ಲಿ ನೆಲೆಸಿದ್ದರು ಹಾಗೂ ಎರಡು ವರ್ಷಗಳ ಹಿಂದೆ ತನ್ನ ಪತಿಯೊಂದಿಗೆ ತಾಯ್ನಡಾದ ಭಾರತಕ್ಕ್ಕೆ ವಾಪಸಾಗಿದ್ದರು.
ದುಬೈ ಡ್ಯೂಟಿ ಫ್ರೀ ಮಿಲೆನಿಯಂ ಮಿಲಿಯನೇರ್’ ಬಹುಮಾನ ಯೋಜನೆಯನ್ನು 1999ರಲ್ಲಿ ಆರಂಭಿಸಲಾಗಿತ್ತು. ಈ 17 ವರ್ಷಗಳಲ್ಲಿ 226 ಮಂದಿ ವಿಜೇತರಿಗೆ 1 ದಶಲಕ್ಷ ಡಾಲರ್ ವೌಲ್ಯದ ಚೆಕ್‌ಗಳನ್ನು ನೀಡಲಾಗಿದೆ. ವಿಶೇಷವೆಂದರೆ ಈ ಬಹುಮಾನವನ್ನು ಗೆದ್ದವರಲ್ಲಿ ಹೆಚ್ಚುಕಮ್ಮಿ ಅರ್ಧಾಂಶದಷ್ಟು ಮಂದಿ ಭಾರತೀಯರೇ ಆಗಿದ್ದಾರೆ.