ಸೌದಿಯಲ್ಲಿ ಮೃತಪಟ್ಟ ಭಾರತೀಯ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ನೆರವು

Update: 2016-10-24 09:56 GMT

ರಿಯಾದ್, ಅ.24: ಸೌದಿ ಅರೆಬೀಯದಲ್ಲಿ  ಹೃದಯಾಘಾತದಿಂದ ಮೃತಪಟ್ಟ ಭಾರತದ ಕರ್ನಾಟಕದ ಗುಲ್ಬರ್ಗಾ ಮೂಲದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ನೆರವಾಗಿದೆ.

ಸುಮಾರು ಹನ್ನೊಂದು ವರ್ಷಗಳಿಂದ ಸೌದಿ ಅರೆಬೀಯದ ರಿಯಾದಿನಲ್ಲಿರುವ ಅಲ್ ಮಲಝ್‍ನ ಕಂಪೆನಿಯೊಂದರಲ್ಲಿ  ಚಾಲಕನಾಗಿ ದುಡಿಯುತ್ತಿದ್ದ ಗುಲ್ಬರ್ಗಾ ಮುಲದ ಸಯ್ಯದ್ ಹುಸೇನ ಅನ್ವರ್ ಎಂಬವರು ಅ.16ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿರುವ ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರಾದ ಮತೀನ್ ಗುಲ್ಬರ್ಗಾ ಮತ್ತವರ ಸ್ನೇಹಿತ ಸುಹೈಲ್ ಗುಲ್ಬರ್ಗಾ ಅವರು  ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರನ್ನು ನೆರವಿಗಾಗಿ ಸಂಪರ್ಕಿಸಿದ್ದರು.

ಇಂಡಿಯನ್ ಸೋಶಿಯಲ್ ಫೋರಂನ ಇಸ್ಮಾಯಿಲ್ ಮಂಗಳಪೇಟೆ ಮತ್ತು ಇಬ್ರಾಹಿಂ ಅನಾಜೆ ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೋಲಿಸ್ ಠಾಣೆಗೆ ಭೇಟಿ ನೀಡಿ ಸಯ್ಯದ್ ಹುಸೇನ ಅನ್ವರ್ ರ ಮರಣ ಸಹಜ ಎಂದು ದೃಢೀಕರಣ ಪತ್ರ ಪಡೆಯಲಾಯಿತು. ಬಳಿಕ ಮೃತದೇಹವನ್ನು ಪಡೆಯುಲು ರಿಯಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು  ಊರಿನಲ್ಲಿರುವ ಮೃತರ ರಕ್ತ ಸಂಬಂಧಿಗಳನ್ನು ಸಂಪರ್ಕಿಸಿ  ಮತೀನ್‌ರ ಹೆಸರಿನಲ್ಲಿ ಅಧಿಕಾರ ಪತ್ರವನ್ನು ಭಾರತೀಯ ರಾಯಭಾರ ಕಚೇರಿಯ ಮೂಲಕ ಪಡೆದು, ಮೃತದೇಹವನ್ನು ಆಸ್ಪತ್ರೆಯಿಂದ ಪಡೆಯಲಾಯಿತು.

ಅ.21ರಂದು ರಿಯಾದಿನ ಅಲ್ ರಾಜಿ ಮಸೀದಿಯಲ್ಲಿ ಜುಮ್ಮಾ ನಮಾಝ್ನ ನಂತರ ಮಯ್ಯತ್ ನಮಾಝ್ ನಿರ್ವಹಿಸಲಾಯಿತು. ಅಲ್ ನಸೀಮ್ ದಫನಭೂಮಿಯಲ್ಲಿ ಇಂಡಿಯನ್ ಸೋಶಿಯಲ್ ಫಾರಂನ ಸದಸ್ಯರು ಮತ್ತು ಅವರ ಆಪ್ತರ ಸಮ್ಮುಖ ದಲ್ಲಿ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನಿರ್ವಹಿಸಲಾಯಿತು.

ಫೋರಂನ ಸದಸ್ಯ ಇಬ್ರಾಹೀಂ ಅನಾಜೆ ಮತೀನ್ ಮತ್ತು ಸುಹೈಲ್‌ ರೊಂದಿಗೆ ಮೃತರು ಕಾರ್ಯನಿರ್ವಹಿಸುತ್ತಿದ್ದ ಕಂಪೆನಿಗೆ ಭೇಟಿ ನೀಡಿ ಬಾಕಿ ಇದ್ದ  ಅವರ ಸಂಬಳವನ್ನು ಪಡೆದು ಅವರು ಸಂಬಂಧಿಗಳಿಗೆ ಹಸ್ತಾಂತರಿಸಿದರು. ಹನ್ನೊಂದು ವರ್ಷದ ಸೇವೆಯ ಮೊತ್ತವನ್ನು  ಪಡೆಯಲು ವ್ಯವಸ್ಥೆ ಮಾಡಲಾಯಿತು. ಇವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫಾರಂನ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಸಂಬಂಧಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News