ಸೌದಿ ಆರ್ಥಿಕ ಪರಿಸ್ಥಿತಿ ಬಗ್ಗೆ ಶುಭ ಸುದ್ದಿ

Update: 2016-10-25 07:02 GMT

ಲಂಡನ್, ಅ.25: ತೈಲ ಬೆಲೆ ಕುಸಿತದಿಂದ ಸೌದಿ ಆರ್ಥಿಕತೆ ಸಂಕಷ್ಟಕ್ಕೀಡಾಗಿದ್ದರೂ ಅಲ್ಲಿನ ಬ್ಯಾಂಕುಗಳು ಇಲ್ಲಿಯ ತನಕ ಈ ಪ್ರತಿಕೂಲ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಿಸಿವೆ ಎಂಬ ಅಭಿಪ್ರಾಯವನ್ನು ಕ್ಯಾಪಿಟಲ್ ಇಕನಾಮಿಕ್ಸ್ ವ್ಯಕ್ತಪಡಿಸಿದೆ.

‘‘ಸೌದಿಯ ಬ್ಯಾಂಕಿಂಗ್ ಕ್ಷೇತ್ರ ಪ್ರಬಲವಾಗಿದ್ದು ಈಗಿನ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುತ್ತಿದೆ ಹಾಗೂ ಮುಂದೆಯೂ ಚೆನ್ನಾಗಿ ನಿಭಾಯಿಸುವುದು’’ ಎಂಬ ವಿಶ್ವಾಸವನ್ನು ಕ್ಯಾಪಿಟಲ್ ಇಕನಾಮಿಕ್ಸ್ ಇದರ ಮಧ್ಯ ಪೂರ್ವ ಆರ್ಥಿಕ ತಜ್ಞ ಜೇಸನ್ ಟರ್ವೇ ವ್ಯಕ್ತಪಡಿಸಿದ್ದಾರೆ.

‘‘ಸೌದಿ ಆರ್ಥಿಕತೆಯ ಕೆಟ್ಟ ಗಳಿಗೆ ಕಳೆದು ಹೋಯಿತು. ಸಾರ್ವಜನಿಕ ಖರ್ಚುವೆಚ್ಚಗಳಲ್ಲಿ ಕಡಿತವನ್ನು ಈಗಾಗಲೇ ಮಾಡಲಾಗಿದೆ. ಮುಂದಿನ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದೆಂಬ ಆಶಾವಾದವಿದೆ. ತೈಲೇತರ ಕ್ಷೇತ್ರಗಳಲ್ಲಿ ಸೌದಿ ಅರೇಬಿಯಾ ಪ್ರಗತಿ ಸಾಧಿಸಲಿದೆ’’ ಎಂದು ಅವರು ತಿಳಿಸಿದ್ದಾರೆ.

‘‘ಕೆಲವೊಂದು ಬ್ಯಾಂಕುಗಳು ಸಮಸ್ಯೆಯೆದುರಿಸಬೇಕಾದರೂ, ಇಡೀ ಬ್ಯಾಂಕಿಂಗ್ ರಂಗವನ್ನು ಪರಿಗಣಿಸಿದರೆ ಅದು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಪ್ರಸಕ್ತ ಅನುತ್ಪಾದಕ ಸಾಲಗಳ ಪ್ರಮಾಣ ಒಟ್ಟು ಸಾಲದ ಕೇವಲ ಶೇ.1.2 ರಷ್ಟಿದೆ,’’ ಎಂದು ಕ್ಯಾಪಿಟಲ್ ಇಕನಾಮಿಕ್ಸ್ ಹೇಳಿದೆ.

‘‘ದೇಶದ ಕಟ್ಟಡ ನಿರ್ಮಾಣ ರಂಗದ ಸಮಸ್ಯೆಗಳತ್ತ ಹೆಚ್ಚು ಬೆಳಕು ಚೆಲ್ಲಲಾಗಿದ್ದರೂ ಬ್ಯಾಂಕುಗಳು ನೀಡಿದ ಒಟ್ಟು ಸಾಲದಲ್ಲಿ ನಿರ್ಮಾಣ ಸಂಸ್ಥೆಗಳಿಗೆ ನೀಡಿದ ಸಾಲ ಕೇವಲ ಶೇ. 8 ರಷ್ಟಾಗಿದೆ’’ ಎಂದು ಅದು ಹೇಳಿದೆಯಲ್ಲದೆ ‘‘ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ನೀಡಿದ ಸಾಲಗಳು ಮರುಪಾವತಿಯಾಗದೇ ಇದ್ದರೂ ಬ್ಯಾಂಕುಗಳ ಪರಿಸ್ಥಿತಿ ಹದಗೆಡದು,’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News