ರಿಯಾದ್-ಮಂಗಳೂರು ನಡುವೆ ನೇರ ವಿಮಾನಯಾನ ಸೌಲಭ್ಯ ಕಲ್ಪಿಸಲು ಕರಾವಳಿ ವೆಲ್ಫೇರ್ ಅಸೋಸಿಯೇಷನ್ ಮನವಿ

Update: 2016-10-30 13:08 GMT

ರಿಯಾದ್, ಅ.30: ರಿಯಾದ್‌ನಲ್ಲಿ ನೆಲೆಸಿರುವ ಕರಾವಳಿಗಳ ಬಹುದಿನಗಳ ಬೇಡಿಕೆಯಾದ ರಿಯಾದ್-ಮಂಗಳೂರು ನಡುವೆ ನೇರ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಕರಾವಳಿ ವೆಲ್ಫೇರ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರಿಗೆ ಮನವಿ ಸಲ್ಲಿಸಿದೆ.

ರಿಯಾದ್‌ನಲ್ಲಿ ನಡೆದ ಬ್ಯಾರಿ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವ ಯು .ಟಿ ಖಾದರ್‌ರನ್ನು ಭೇಟಿಯಾದ ರಿಯಾದ್‌ನ ಕರಾವಳಿ ವೆಲ್ಫಾರ್ ಅಸೋಸಿಯೇಷನ್‌ನ ಅಧ್ಯಕ್ಷರು ಹಾಗು ಪದಾಧಿಕಾರಿಗಳು, ರಿಯಾದ್-ಮಂಗಳೂರು ನಡುವೆ ನೇರ ವಿಮಾನಯಾನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ, ಈ ಹಿಂದೆ ಸಚಿವರು ಹಾಗೂ ಅಮೇಕೋ ಸಿಇಒ ಮುಹಮ್ಮದ್ ಆಸೀಫ್ ಅವರು ಎರಡು ಬಾರಿ ದಿಲ್ಲಿಯಲ್ಲಿ ಇಬ್ಬರು ವಿಮಾನಯಾನ ಖಾತೆ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಪ್ರಸ್ತಾಪಿಸಿರುವುದನ್ನು ಸದಸ್ಯರು ಸ್ಮರಿಸಿಕೊಂಡು, ಮುಂದಕ್ಕೂ ಪ್ರಯತ್ನ ಮುಂದುವರೆಸುವಂತೆ ಮನವಿ ಮಾಡಿಕೊಂಡರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಶ್ರಮಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭ ಕರಾವಳಿ ವೆಲ್ಪೇರ್ ಅಸೋಸಿಯೇಷನ್‌ನ ಪದಾಧಿಕಾರಿಗಳ ಪ್ರತ್ಯೇಕ ತಂಡವು ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವರೊಂದಿಗೆ ಚರ್ಚಿಸಿ, ತಾತ್ಕಾಲಿಕವಾಗಿ ಏರ್ ಇಂಡಿಯಾ ವೇಳಾಪಟ್ಟಿಯನ್ನು ಬದಲಾಯಿಸಿ ಪ್ರಯಾಣಿಕರಿಗೆ ನೆರವಾಗುವಂತೆ ಕನೆಕ್ಟಿಂಗ್ ಫ್ಲೈಟ್ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು, ಈ ಬಗ್ಗೆ ಆಸ್ಕರ್ ಫೆರ್ನಾಂಡಿಸ್‌ರೊಂದಿಗೆ ಚರ್ಚಿಸಿ ಕೇಂದ್ರ ಸರಕಾರದ ಅಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಕರಾವಳಿ ವೆಲ್ಫೇರ್‌ನ ಅಧ್ಯಕ್ಷ ಸಂತೋಷ್ ಶೆಟ್ಟಿ ಆರ್ಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪರ್ವೇಝ್ ಅಲಿ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಸನ್ನ ರಾವ್, ಕೋಶಾಧಿಕಾರಿ ನಝೀರ್ ಅಹ್ಮದ್, ಕ್ರೀಡಾ ಕಾರ್ಯದರ್ಶಿ ಇಕ್ಬಾಲ್ ಶಿರ್ವ, ಪದಾಧಿಕಾರಿಗಳಾದ ಜಿ.ಕೆ.ಶೇಖ್, ಅಬೂಬಕರ್ ಇರ್ಫಾನ್, ಹಮೀದ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News