2.5 ಮಿ.ಡಾ.ಮೌಲ್ಯದ ತಿಮಿಂಗಿಲದ ‘ವಾಂತಿ’ ಪತ್ತೆ
ದುಬೈ,ನ.6: ಸಮುದ್ರದಲ್ಲಿ ತೇಲುತ್ತಿದ್ದ ಅಪರೂಪದ, ಸುಮಾರು 80 ಕೆಜಿಗಳಷ್ಟು ತೂಕದ ‘‘ತಿಮಿಂಗಿಲದ ವಾಂತಿ’ ಯನ್ನು ಪತ್ತೆ ಹಚ್ಚಿರುವ ಓಮಾನಿನ ಮೂವರು ಮೀನುಗಾರರಿಗೆ ಭಾರೀ ಜಾಕ್‌ಪಾಟ್ ಹೊಡೆದಿದೆ. ಮಾರುಕಟ್ಟೆಯಲ್ಲಿ ಈ ‘ವಾಂತಿ’ 2.5 ಮಿಲಿಯ ಡಾಲರ್ ಬೆಲೆ ಬಾಳುತ್ತದೆ. ಕಳೆದ ವಾರ ಕುರಾಯತ್ ಪ್ರಾಂತ್ಯದ ಸಮುದ್ರ ತೀರದಲ್ಲಿ ಖಾಲಿದ್ ಅಲ್ ಸಿನಾನಿ ಈ ‘ತೇಲುವ ನಿಧಿ’ ಯನ್ನು ಪತ್ತೆ ಹಚ್ಚಿದ್ದಾನೆ.
ತಿಮಿಂಗಲದ ವಾಂತಿ ಅಥವಾ ಆ್ಯಂಬರ್‌ಗ್ರಿಸ್ ತಿಮಿಂಗಲದ ಕರುಳುಗಳಲ್ಲಿ ಉತ್ಪಾದನೆಯಾಗುವ ಅತ್ಯಂತ ದುಬಾರಿ ಮೇಣವಾಗಿದೆ. ಉಷ್ಣವಲಯದ ಸಮುದ್ರಗಳಲ್ಲಿ ಇದು ತೇಲುತ್ತಿರುತ್ತದೆ ಮತ್ತು ಇದನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಸುಮಾರು 20 ವರ್ಷಗಳಿಂದ ಮೀನುಗಾರ ವೃತ್ತಿಯಲ್ಲಿರುವ ಖಾಲಿದ್ ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಲೂ ಹೆಣಗಾಡುತ್ತಿದ್ದ. ಒಂದಲ್ಲ ಒಂದು ದಿನ ಸಮುದ್ರ ಲಾಟರಿಯಂತೆ ತಿಮಿಂಗಲದ ವಾಂತಿ ಲಭಿಸಬಹುದೆಂಬ ಆತನ ಬಾಲ್ಯದ ಕನಸು ಈಗ ನನಸಾಗಿದೆ.
ಅ.30ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ಸಮುದ್ರದ ತೀರದ ಬಳಿ ಮೀನುಗಾರಿಕೆ ಯಲ್ಲಿ ತೊಡಗಿದ್ದ ಖಾಲಿದ್‌ಗೆ ನೀರಿನ ಮೇಲೆ ತೇಲುತ್ತಿದ್ದ ಆ್ಯಂಬರ್‌ಗ್ರಿಸ್ ಕಣ್ಣಿಗೆ ಬಿದ್ದಿತ್ತು. ದುರ್ಗಂಧ ಬೀರುತ್ತಿದ್ದ ಅದನ್ನು ಹಗ್ಗದ ಮೂಲಕ ದೋಣಿಯೊಳಗೆ ಎಳೆದುಕೊಳ್ಳುವಲ್ಲಿ ಅವರು ಸಫಲರಾಗಿದ್ದರು.
ತಿಮಿಂಗಲದ ವಾಂತಿ ಆರಂಭದಲ್ಲಿ ದುರ್ಗಂಧ ಬೀರುತ್ತದೆ, ಆದರೆ ಒಂದೆರಡು ದಿನಗಳ ಬಳಿಕ ಸುಗಂಧ ಬೀರುತ್ತದೆ ಎಂದು ಖಾಲಿದ್ ಕೇಳಿ ತಿಳಿದಿದ್ದ. ಹೀಗಾಗಿ ಸಂತಸದಲ್ಲಿ ತೇಲಾಡುತ್ತಲೇ ಮೂವರು ತಮಗೆ ದೊರಕಿದ ಅಪರೂಪದ ನಿಧಿಯೊಡನೆ ತೀರಕ್ಕೆ ವಾಪಸಾಗಿದ್ದರು.
ತಜ್ಞರು ಅದು ತಿಮಿಂಗಲದ ವಾಂತಿ ಎನ್ನುವುದನ್ನು ದೃಢಪಡಿಸಿದ್ದು, ಖಾಲಿದ್ ಮತ್ತಾತನ ಸಹಚರರು ಮಾರಾಟಕ್ಕೆ ಅನುಕೂಲವಾಗುವಂತೆ ಅದನ್ನು ಒಣಗಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ್ದಾರೆ.
ತಿಮಿಂಗಲದ ವಾಂತಿಗೆ ಯೋಗ್ಯ ಬೆಲೆ ಬರಬಹುದು ಎನ್ನುವುದು ಖಾಲಿದ್‌ನ ನಿರೀಕ್ಷೆ. ಅದು ಮಾರಾಟವಾಗಿ ಹಣ ಕೈಸೇರಿದ ಬಳಿಕ ಮೀನುಗಾರಿಕೆಯನ್ನು ತೊರೆದು ರಿಯಲ್ ಎಸ್ಟೇಟ್ ವೃತ್ತಿಗಿಳಿಯುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾನೆ. ತಮ್ಮ ಸಂಪತ್ತಿಗೆ ಉತ್ತಮ ಮಾರುಕಟ್ಟೆ ಬೆಲೆ ದೊರೆತರೆ ಖಾಲಿದ್ ಮತ್ತು ಆತನ ಸ್ನೇಹಿತರು ಸುಮಾರು 2,597,099 ಡಾಲರ್(ಭಾರತೀಯ ರೂ.ಅಂದಾಜು 17.35 ಕೋ.ರೂ.)ಗಳನ್ನು ಜೇಬಿಗಿಳಿಸಲಿದ್ದಾರೆ.