ಕೆಸಿಎಫ್ ವತಿಯಿಂದ ಮೃತ ಯುವಕನ ಕುಟುಂಬಕ್ಕೆ ಆರ್ಥಿಕ ನೆರವು

Update: 2016-11-06 09:06 GMT

ರಿಯಾದ್, ನ.6: ಇತ್ತೀಚೆಗೆ ಸೌದಿ ಅರೇಬಿಯದ ಜಿದ್ದಾದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ  ಕೆಸಿಎಫ್ ಸದಸ್ಯ, ಕುಕ್ಕಾಜೆ ಶರೀಫ್  ಕುಟುಂಬಕ್ಕೆ ಕೆಸಿಎಫ್ ಸಾಂತ್ವನ ನಿಧಿಯಿಂದ ಆರ್ಥಿಕ ನೆರವು ಒದಗಿಸಲಾಯಿತು.

ಕೆಲ ವರ್ಷಗಳ ಹಿಂದೆ ಸೌದಿಗೆ ಆಗಮಿಸಿದ್ದ ಬಡ ಕುಟುಂಬಕ್ಕೆ ಸೇರಿದ ಶರೀಫ್, ಕಳೆದ ಒಂದು ವರ್ಷದ ಹಿಂದೆ ಊರಿಗೆ ತೆರಳಿ ವಿವಾಹವಾಗಿದ್ದರು. ವಿವಾಹದ ಬಳಿಕ ಸೌದಿಗೆ ವಾಪಸಾಗಿದ್ದರು. ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ ತನ್ನ ಜಿಸಿಸಿಯಾದ್ಯಂತ ಇರುವ ಸುಮಾರು ಆರು ಸಾವಿರ ಮಂದಿ ಸದಸ್ಯರಿಗೆ ಆಪತ್ಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ಸಾಂತ್ವನ ನಿಧಿಯೊಂದನ್ನು ಸ್ಥಾಪಿಸಿದ್ದು ಈ ನಿಧಿಯ ನೋಂದಣಿ ಕಾರ್ಯ ಹಾಗೂ ಅದರ ಸಾಂವಿಧಾನಿಕ ನೀತಿಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಭರದಿಂದ ಸಾಗಿದೆ. ಈ ಯೋಜನೆ ಪೂರ್ಣಗೊಳ್ಳುವುದರೊಂದಿಗೆ ಈ ನಿಧಿಯಲ್ಲಿ ನೋಂದಾಯಿಸಿಕೊಂಡ ಎಲ್ಲಾ ಅನಿವಾಸಿ ಕನ್ನಡಿಗ ಕೆಸಿಎಫ್ ಸದಸ್ಯರಿಗೆ  ತಮ್ಮ ಆಪತ್ಕಾಲದಲ್ಲಿ ಈ ಯೋಜನೆಯ ಪ್ರಯೋಜನ ದೊರೆಯಬಹುದಾಗಿದೆ. ಜಿಸಿಸಿ ಮಟ್ಟದಲ್ಲಿ ಸಾಂತ್ವನ ನಿಧಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಾರದೆ ಇರುವುದರಿಂದ ಶರೀಫ್ ಅವರ ಕುಟುಂಬಕ್ಕೆ ಕೇವಲ ಸೌದಿ ಕೆಸಿಎಫ್ ಕಾರ್ಯಕರ್ತರು ಸಂಗ್ರಹಿಸಿದ ನೆರವು ಮಾತ್ರ ಲಭಿಸಿದೆ.

ಕೆಸಿಎಫ್ ಸೌದಿ ಸಾಂತ್ವನ ವಿಭಾಗದ ಅಧ್ಯಕ್ಷ ಸಲೀಂ ಕನ್ಯಾಡಿ ನೇತೃತ್ವದಲ್ಲಿ ಸುಮಾರು ನಾಲ್ಕು ಲಕ್ಷದ ಮೂವತ್ತೆಂಟು ಸಾವಿರ ರೂಪಾಯಿ  ಸದಸ್ಯರಿಂದ ಸಂಗ್ರಹಿಸಲಾಗಿದ್ದು ಈ ಪೈಕಿ ಒಂದು ಲಕ್ಷದ ಮೂವತ್ತೆಂಟು ಸಾವಿರ ರೂಪಾಯಿಯನ್ನು, ಮೃತರ ತಂಗಿಯರ ಮದುವೆಯೂ ಸೇರಿದಂತೆ ಕುಟುಂಬದ ನಿರ್ವಹಣೆಗಾಗಿ ತಾನು ಕೆಲಸ ಮಾಡುತ್ತಿದ್ದ ಜಿದ್ದಾ ಪರಿಸರದ ಮಿತ್ರರಿಂದ ಸಾಲ ಪಡೆದುಕೊಂಡಿದ್ದನ್ನು ತೀರಿಸುವುದಕ್ಕಾಗಿ ಬಳಸಲಾಗಿದೆ. ಉಳಿದಂತೆ ಬಾಕಿ ಇದ್ದ ಮೂರು ಲಕ್ಷ ರೂ. ಮೊತ್ತವನ್ನು ಕೆಸಿಎಫ್ ಐಎನ್ ಸಿ ಮುಖಂಡ ನಝೀರ್ ಕಾಶಿಪಟ್ಣ ನೇತೃತ್ಭದ ತಂಡ ಇತ್ತೀಚೆಗೆ ಮೃತರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿತು.

ಈ ಸಂದರ್ಭ ತಂಡದಲ್ಲಿ ಮಲ್ಲೂರು ಅಸಾಸ್ ಇಸ್ಲಾಮಿಕ್ ವಿದ್ಯಾ ಕೇಂದ್ರದ ಮುಖ್ಯಸ್ಥ ಅಶ್ರಫ್ ಸಅದಿ ಮಲ್ಲೂರು, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಕೆಸಿಎಫ್ ಜಿದ್ದಾ ಮುಖಂಡ ಹನೀಫ್ ಸಖಾಫಿ ಸಾಲೆತ್ತೂರು, ಅಬ್ದುಲ್ಲತೀಫ್ ಸಅದಿ ಮೋಂತಿಮಾರ್,ಮುಹಮ್ಮದ್ ಕುಕ್ಕಾಜೆ, ರಫೀಕ್ ಕುಕ್ಕಾಜೆ ಹಾಗೂ ಕುಕ್ಕಾಜೆ ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಕೆಸಿಎಫ್ ಪಿಆರ್ ವಿಂಗ್,  ಸೌದಿ ಅರೇಬಿಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News