ಕುವೈಟ್ ಸೋಶಿಯಲ್ ಫೋರಂ ನೆರವು: ಸುರಕ್ಷಿತವಾಗಿ ತವರಿಗೆ ಮರಳಿದ ಇಬ್ಬರು ಭಾರತೀಯರು

Update: 2016-11-06 14:04 GMT

ಕುವೈಟ್, ನ.6: ಕುವೈಟ್‌ನ ಇಂಡಿಯನ್ ಸೋಶಿಯಲ್ ಫೋರಂನ ಸಕಾಲಿಕ ಮಧ್ಯಪ್ರವೇಶದಿಂದ ಸಂಕಷ್ಟದಲ್ಲಿದ್ದ ಇಬ್ಬರು ಅನಿವಾಸಿ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಬೆಂಗಳೂರಿನ ಇಬ್ರಾಹೀಂ ಮತ್ತು ತಮಿಳುನಾಡಿನ ಜಯಶಂಕರ್ ಎಂಬವರು ಕುವೈಟ್‌ಗೆ ಉದ್ಯೋಗ ಅರಸಿಕೊಂಡು ಬಂದಿದ್ದು, ವೀಸಾ ಏಜೆಂಟ್‌ಗಳ ವಂಚನೆಗೆ ಬಲಿಯಾಗಿ ಸುಮಾರು 2 ತಿಂಗಳ ಕಾಲ ಅಪರಿಚಿತ ನಾಡಿನಲ್ಲಿ ದಿಕ್ಕುತೋಚದೆ ಕಂಗಾಲಾಗಿದ್ದರು. ವಿಷಯವನ್ನು ಅರಿತ ಇಂಡಿಯನ್ ಸೋಶಿಯಲ್ ಫೋರಂ ಈ ಇಬ್ಬರು ಭಾರತೀಯರನ್ನು ಸಂಕಷ್ಟದಿಂದ ಪಾರುಮಾಡಿ, ಸ್ವದೇಶಕ್ಕೆ ವಾಪಸು ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದೆ.
 
ಸೌದಿ ಅರೇಬಿಯದಲ್ಲಿ ಪೈಂಟಿಂಗ್ ಕಾಂಟ್ರಾಕ್ಟರ್ ಆಗಿ ಸ್ವಂತ ಉದ್ಯಮ ನಡೆಸುತ್ತಿದ್ದ ಬೆಂಗಳೂರು ಆರ್.ಟಿ. ನಗರ ಮೂಲದ 4ರ ಹರೆಯದ ಇಬ್ರಾಹಿಂ ಮಹಮ್ಮದ್ ಯಾಸೀನ್ (48) ಹಾಗೂ ತಮಿಳುನಾಡಿನ ಮಲ್ಲಾಪುರಂ ಎಂಬಲ್ಲಿನ ಜಯಶಂಕರ್ ಮಣಿಕ್ಕಂ (38) ಎಂಬವರು ಕುವೈಟ್‌ನಲ್ಲಿ ಉತ್ತಮ ಕೆಲಸದ ಜೊತೆಗೆ ಸ್ವಂತ ಉದ್ಯಮ ಸ್ಥಾಪಿಸಲು ಹೆಚ್ಚಿನ ಅವಕಾಶ ಎಂಬ ವೀಸಾ ಏಜೆಂಟ್‌ನ ಆಮಿಷಕ್ಕೆ ಬಲಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದರು. 2015ರ ಫೆಬ್ರವರಿ ತಿಂಗಳಲ್ಲಿ ಕುವೈಟ್‌ಗೆ ಆಗಮಿಸಿದ್ದ ಇಬ್ಬರಿಗೆ ಇಲ್ಲಿನ ಕಾರ್ ರೆಂಟಲ್ ಕಂಪೆನಿಯೊಂದರಲ್ಲಿ 7 ದಿನಾರ್ ಸಂಬಳಕ್ಕೆ ಡ್ರೈವರ್ ಉದ್ಯೋಗ ಲಭಿಸಿತ್ತು. ನಿರಂತರ 3 ತಿಂಗಳ ಕಾಲ ದುಡಿದರೂ ಸಂಬಳ ಸಿಗದಾದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಅವರಿಗೆ ಕಂಪೆನಿಯು ಪಾಸ್ಪೋರ್ಟ್ ನೀಡದೆ ಸತಾಯಿಸುತ್ತಿತ್ತು. ಇದರಿಂದಾಗಿ ಕೆಲಸವೂ ಇಲ್ಲದೆ ಊರಿಗೆ ಮರಳಲೂ ಆಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.

ಈ ಮಧ್ಯೆ ಕೆಲ ದಿನಗಳ ಹಿಂದೆ ಇಬ್ರಾಹೀಂರ ಆರೋಗ್ಯ ತೀರಾ ಹದಗೆಟ್ಟಿತ್ತು. ಇಬ್ರಾಹೀಂರ ನೆರವಿಗಾಗಿ ಅವರ ಕುಟುಂಬಸ್ಥರು ಕರ್ನಾಟಕ ಸರಕಾರದ ಎನ್‌ಆರ್‌ಐ ಫೋರಂನ ಮೊರೆ ಹೋಗಿದ್ದರು. ಎರಡು ತಿಂಗಳುಗಳ ಐಎಸ್‌ಎಫ್ ಹಾಗೂ ಎನ್‌ಆರ್‌ಐ ಫೋರಂನ ನಿರಂತರ ಹಾಗೂ ಪರಿಣಾಮಕಾರಿ ಮಧ್ಯಪ್ರವೇಶದಿಂದ ಈ ಇಬ್ಬರೂ ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದಾರೆ.

ವಿದೇಶ ಉದ್ಯೋಗ ಅರಸಿಕೊಂಡು ಬರುವ ಭಾರತೀಯರು ಸಾಕಷ್ಟು ಮುಂಜಾಗ್ರತೆ ವಹಿಸಿಕೊಂಡು ವೀಸಾ ಏಜೆಂಟರ ವಂಚನೆಗೆ ಬಲಿಯಾಗದಂತೆ ಎಚ್ಚರವಹಿಸಬೇಕು ಎಂದು ಸೋಶಿಯಲ್ ಫೋರಂ ಮನವಿ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News