ಗಲ್ಫ್ ಮೆಡಿಕಲ್ ವಿವಿಗೆ ಹೊಸ ಹೆಸರು ತುಂಬೆ ವಿಶ್ವವಿದ್ಯಾಲಯ !
ದುಬೈ, ನ.7: ಗಲ್ಫ್ ಮೆಡಿಕಲ್ ಯುನಿವರ್ಸಿಟಿ ತನ್ನ ವಿಸ್ತರಣಾ ಯೋಜನೆಯನ್ನು ಘೋಷಿಸಿದ್ದು ಹೊಸ ಇಂಜಿನಿಯರಿಂಗ್ ಹಾಗೂ ಬಿಸಿನೆಸ್ ಮ್ಯಾನೇಜ್ಮೆಂಟ್ ಕೋರ್ಸುಗಳನ್ನು ಸೇರ್ಪಡೆಗೊಳಿಸಲಿದೆ. ವಿಸ್ತರಣಾ ಯೋಜನೆ ಪೂರ್ತಿಗೊಂಡಂತೆ ವಿಶ್ವವಿದ್ಯಾಲಯವು ತುಂಬೆ ವಿಶ್ವವಿದ್ಯಾಲಯವೆಂದು ಪುನರ್ ನಾಮಕರಣಗೊಳ್ಳಲಿದೆ. ವಿಶ್ವವಿದ್ಯಾಲಯದ ವಾರ್ಷಿಕ ಜಾಗತಿಕ ಸಮ್ಮೇಳನದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಸಮ್ಮೇಳನದ ಸಂದರ್ಭ ಸ್ಟಾರ್ಟ್ ಅಪ್ ಲ್ಯಾಬ್ ಆರಂಭಗೊಳಿಸಲಾಗಿದ್ದು ವಿಸ್ತರಣಾ ಯೋಜನೆಯನ್ನು ಅಝ್ಮಾನ್ ಮುನಿಸಿಪಾಲಿಟಿಯ ಅಧ್ಯಕ್ಷ ಶೇಖ್ ಬಿನ್ ರಶೀದ್ ಬಿನ್ ಹುಮೈದ್ ಅಲ್ ನುಯಾಮಿ ಅವರು ಘೋಷಿಸಿದರು.
ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸ್ಥಾಪಕ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ತುಂಬೆ ಮೊಯ್ದೀನ್, ವಿಶ್ವವಿದ್ಯಾಲಯದ ಪ್ರೊವೊಸ್ಟ್ ಪ್ರೊ.ಗೀತಾ ಅಶೋಕ್ ರಾಜ್, ವಿಶ್ವ ವಿದ್ಯಾಲಯ ಸಂಯೋಜಿತ ವಿವಿಧ ಕಾಲೇಜುಗಳ ಡೀನ್ ಗಳು ಹಾಗೂ 200 ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸುಮಾರು 10 ದೇಶಗಳಿಂದ ಭಾಗವಹಿಸಿದ್ದರು.
ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಬಿಸಿನೆಸ್ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ಸಹಕರಿಸುವಂತಹ ವೇದಿಕೆಯನ್ನು ಸ್ಟಾರ್ಟ್ ಅಪ್ ಲ್ಯಾಬ್ ಒದಗಿಸಲಿದೆ. ಈ ಮುಖಾಂತರ ವಿಶ್ವವಿದ್ಯಾಲಯವು ಅತ್ಯುತ್ತಮ ಬಿಸಿನೆಸ್ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ವಿವಿಧ ರೀತಿಯಲ್ಲಿ ಸಹಾಯ ಮಾಡಲಿದೆ.
‘‘ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆಯೆಂದು ಸಮ್ಮೇಳನದ ಸಂದರ್ಭ ಮಾತನಾಡಿದ ತುಂಬೆ ಮೊಯ್ದಿನ್ ಹೇಳಿದರು.
‘‘ದೇಶದ ಒಂದನೆ ಐದರಷ್ಟು ವೈದ್ಯರುಗಳಿಗೆ ಹಾಗೂ ಶೇ.60 ರಷ್ಟು ಆರೋಗ್ಯ ಸೇವಾ ಕ್ಷೇತ್ರದ ವೃತ್ತಿಪರರಿಗೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಟೀಚಿಂಗ್ ಹಾಸ್ಪಿಟಲ್ ಗಳು ತರಬೇತಿಯೊದಗಿಸುತ್ತಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸಂಸ್ಥೆಯ 15 ಮಂದಿ ಪ್ರತಿಭಾನ್ವಿತ ಹಳೆ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಯಿತು.