ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಪುಸ್ತಕ ಮಳಿಗೆ

Update: 2016-11-08 13:36 GMT

ಶಾರ್ಜಾ, ನ.8: ಯುಎಇಯ ಕನ್ನಡಿಗರಿಗಾಗಿ ‘ಶಾಂತಿಗಾಗಿ ಸಾಹಿತ್ಯ’ ಹೆಸರಿನಲ್ಲಿ ಶಾರ್ಜಾದಲ್ಲಿ ನ.2ರಿಂದ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳ ಆರಂಭಗೊಂಡಿದೆ. ಈ ಮೇಳದಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ಶಾಂತಿ ಪ್ರಕಾಶನದ ಪುಸ್ತಕ ಮಳಿಗೆಯನ್ನು ತೆರೆಯಲಾಗಿದೆ.

ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾದಲ್ಲಿ ಶಾರ್ಜಾದ ದೊರೆ ಡಾ.ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿಯವರ ನೇತೃತ್ವದಲ್ಲಿ ವರ್ಷಂಪ್ರತಿ ನವೆಂಬರ್ ತಿಂಗಳ ಮೊದಲ ಹತ್ತು ದಿನಗಳ ಕಾಲ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳವು ನಡೆಯುತ್ತದೆ. 1982ರಿಂದ ಆರಂಭಗೊಂಡ ಪುಸ್ತಕ ಮೇಳವು ಇಂದು ವಿಶ್ವದಲ್ಲೇ ನಾಲ್ಕನೆಯ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.ಇದೀಗ 35ನೆ ಪುಸ್ತಕ ಮೇಳವು ಆರಂಭಗೊಂಡಿದ್ದು, ವಿಶ್ವದ ನಾನಾ ಭಾಗಗಳಿಂದ ಸಾಹಿತ್ಯ ಪ್ರೇಮಿಗಳು ಪುಸ್ತಕ ಮೇಳಕ್ಕೆ ಆಗಮಿಸುತ್ತಿದ್ದಾರೆ. 

ಶಾಂತಿಪ್ರಕಾಶನದಿಂದ ಸೌಹಾರ್ದಯುತ ವಾತಾವರಣ ನಿರ್ಮಾಣ: ಸರ್ವೋತ್ತಮ ಶೆಟ್ಟಿ  

ಶಾಂತಿ ಪ್ರಕಾಶನವು ಮೂರು ಸಂಚಾರಿ ವಾಹನಗಳ ಮೂಲಕ ಕರ್ನಾಟಕದಾದ್ಯಂತ ಸಂಚರಿಸಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಮತ್ತು ಸಡೌಹಾರ್ದಯುತ ವಾತಾವರಣವನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದೆ. ಉನ್ನತ ಮೌಲ್ಯಗಳನ್ನು ತನ್ನದಾಗಿಸಿಕೊಂಡಿರುವ ಈ ಸಂಸ್ಥೆಯು ವಿಶ್ವಮಟ್ಟಕ್ಕೆ ಬೆಳೆಯಲಿ ಎಂದು ಅಬುಧಾಬಿ ಕನ್ನಡ ಸಂಘದ ಮುಂದಾಳು ಸರ್ವೋತ್ತಮ್ ಶೆಟ್ಟಿ ಹೇಳಿದರು.

ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ತಫ್ಹೀಮುಲ್ ಕುರ್‌ಆನ್‌ನ ಭಾಗ-6ನ್ನು ಪ್ರೊಫಾರ್ಮ ಔಷಧ ಸಂಸ್ಥೆಯ ಮಾಲಕ ಡಾ. ಮುಹಮ್ಮದ್ ಅಬುಲ್ ಖೈರ್ ಬಿಡುಗಡೆಗೊಳಿಸಿದರು. ಶಾಂತಿ ಪ್ರಕಾಶನದ ಮೊಬೈಲ್ ಆಪ್‌ನ್ನು ದುಬೈ ಕನ್ನಡ ಸಂಘದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಅನಾವರಣಗೊಳಿಸಿದರು. ‘ಪ್ರಕಾಶ ಬಿಂದುಗಳು’ ಹದೀಸ್ ಗ್ರಂಥವನ್ನು ದುಬೈ ಕನ್ನಡ ಸಂಘದ ಅದ್ಯಕ್ಷೆ ಉಮಾ ವಿದ್ಯಾಧರ್ ಬಿಡುಗಡೆಗೊಳಿಸಿದರು.

 ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂಬುದು ಶಾಂತಿ ಪ್ರಕಾಶನದ ಧ್ಯೇಯೋದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಯುಎಇ ಇದರ ರಾಷ್ಟ್ರೀಯ ಅಧ್ಯಕ್ಷ ಆರಿಫ್ ಶರೀಫ್, ಐಸಿಸಿ ಶಾರ್ಜಾ ಮುಖ್ಯಸ್ಥ ಅಬ್ದುಲ್ ಖದೀರ್, ಖಕ್ಕಿ ಇಲ್ಯಾಸ್, ಅಖ್ತರ್ ಹುಸೈನ್ ಭಟ್ಕಳ್, ನೂರ್ ಅಶ್ಪಾಕ್ ಕಾರ್ಕಳ, ಶಾಂತಿ ಪ್ರಕಾಶನ ಪುಸ್ತಕ ಮಳಿಗೆಯ ಸಂಚಾಲಕ ಅಬ್ದುಸ್ಸಲಾಮ್ ದೇರಳಕಟ್ಟೆ, ವಿ.ಕೆ. ರಶೀದ್, ಹಫೀಝ್ ಕುದ್ರೋಳಿ, ಅಶ್ರಫ್ ಹಸನ್ ಉಳ್ಳಾಲ, ಮರ್ಯಮ್ ಶಹೀರ, ಅಶ್ರಫ್ ಮಡಿಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪುಸ್ತಕ ಮೇಳದ ಹಾಲ್ ನಂ.5ರ ಸ್ಟಾಲ್ ನಂ. ಎಂ-2ರಲ್ಲಿ ಶಾಂತಿ ಪ್ರಕಾಶನದ ಪುಸ್ತಕ ಮಳಿಗೆ ಕಾರ್ಯಾಚರಿಸುತ್ತಿದೆ. ಮಳಿಗೆಯಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ವೈಚಾರಿಕ, ಕೌಟುಂಬಿಕ, ಆಧ್ಯಾತ್ಮಿಕ, ಮತ್ತು ಮನುಕುಲಕ್ಕೆ ಮಾರ್ಗದರ್ಶನ ನೀಡುವ ಕನ್ನಡ ಸಾಹಿತ್ಯಗಳ ಬೃಹತ್ ಸಂಗ್ರಹವಿದೆ ಎಂದು ಶಾಂತಿ ಪ್ರಕಾಶನದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News