ದುಬೈ: ಇಲೆಕ್ಟ್ರಾನಿಕ್ ಮಳಿಗೆಯ ಉದ್ಘಾಟಿಸಿದ ಚಹಾ ಮಾರಾಟಗಾರ

Update: 2016-11-27 16:55 GMT

ದುಬೈ,ನ.27: ದೊಡ್ಡ ಮಳಿಗೆಗಳನ್ನು,ಅಂಗಡಿಗಳನ್ನು ಗಣ್ಯ ವ್ಯಕ್ತಿಗಳಿಂದಲೇ ಉದ್ಘಾಟಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲಿನ ಅನಿವಾಸಿ ಭಾರತೀಯರೊಬ್ಬರು ತನ್ನ ಇಲೆಕ್ಟ್ರಾನಿಕ್ ಮಳಿಗೆಯ ಹೊಸ ಶಾಖೆಯನ್ನು 50 ವರ್ಷ ವಯಸ್ಸಿನ ಭಾರತೀಯ ಚಹಾ ಮಾರಾಟಗಾರರೊಬ್ಬರಿಂದ ಉದ್ಘಾಟಿಸಿ ಇತರರಿಗೆ ಮೇಲ್ಪಂಕ್ತಿಯಾಗಿದ್ದಾರೆ.

ಕೀ ಫ್ಯಾಶನ್ಸ್ ಇಲೆಕ್ಟ್ರಾನಿಕ್ಸ್ ಟ್ರೇಡಿಂಗ್ ಕಂಪೆನಿ ಚೇರ್‌ಮನ್ ನೀಲೇಶ್ ಭಾಟಿಯಾ ಅವರು ಕಳೆದ 20 ವರ್ಷಗಳಿಂದ ದೇರಾ ಪ್ರದೇಶದ ಮುಸಲ್ಲಾ ರಸ್ತೆಯಲ್ಲಿ ಕಳೆದ ಚಹಾ ಮಾರಾಟ ಮಾಡುತ್ತಿರುವ ಕೇರಳ ಮೂಲದ ಮುಹಮ್ಮದ್ ಶಫಿಯವರಿಂದ ತನ್ನ ನೂತನ ಮಾಳಿಗೆಯ ಉದ್ಘಾಟನೆ ಮಾಡಿಸಿದ್ದಾರೆ.

ಗೌರವ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಶಫಿ ಅವರಿಗೆ ಭಾಟಿಯಾ ಶಾಲು ಹೊದಿಸಿ ಸನ್ಮಾನಿಸಿದರು. ಆನಂತರ ನೆರೆದಿದ್ದ ಆಹ್ವಾನಿತರ ಕರತಾಡನದ ನಡುವೆ ಶಫಿ ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಆನಂತರ ಶಫಿ ಅವರು ನೂತನ ಮೊಬೈಲ್ ಹೆಡ್‌ಫೋನ್ ಸೆಟ್ ಖರೀದಿಸಿ, ಮಳಿಗೆಯ ಪ್ರಥಮ ಗ್ರಾಹಕರೆನಿಸಿಕೊಂಡರು.

‘‘ನನಗೆ ಇಂತಹ ಗೌರವ ದೊರೆಯುವುದೆಂದು ನಾನು ಎಂದೂ ನಿರೀಕ್ಷಿಸಿರಲಿಲ್ಲ. ಜನರು ಇಂತಹ ಸದ್ಭಾವನೆಗಳನ್ನು ಪ್ರದರ್ಶಿಸಿರುವುದನ್ನು ನಾನೆಂದೂ ಕೇಳಿರಲಿಲ್ಲ. ಅಂಗಡಿ ಮಾಲಕ ಭಾಟಿಯಾ ಅವರಿಗೆ ಉದ್ಯಮ ಹಾಗೂ ಬಾಳಿನಲ್ಲಿ ಶ್ರೇಯಸ್ಸು ಒದಗಲಿ ಎಂಬುದೇ ನನ್ನ ಹಾರೈಕೆ’’ ಎಂದು ಶಫಿ ಭಾವುಕರಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News