ದುಬೈ: ನ್ಯಾಯಾಲಯಕ್ಕೆ ಹಾಜರಾಗಲು 1,000 ಕಿ.ಮೀ. ನಡೆದ ಭಾರತೀಯ

Update: 2016-11-29 14:53 GMT

ದುಬೈ, ನ. 29: ದುಬೈಯಲ್ಲಿರುವ 48 ವರ್ಷದ ಅನಿವಾಸಿ ಭಾರತೀಯ ಜಗನ್ನಾಥನ್ ಸೆಲ್ವರಾಜ್ ಎರಡು ವರ್ಷಗಳಲ್ಲಿ 1,000 ಕಿ.ಮೀ.ಗೂ ಅಧಿಕ ದೂರ ನಡೆದು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗುತ್ತಿದ್ದಾರೆ. ಅವರು ಹೀಗೆ ಮಾಡುತ್ತಿರುವುದು ತನ್ನ ಊರಿಗೆ ಮರಳುವುದಕ್ಕಾಗಿ.

ವಾಹನ ದಟ್ಟಣೆ, ಶಾಖ, ಮರಳು ಬಿರುಗಾಳಿ ಮತ್ತು ಬಳಲಿಕೆಗಳನ್ನು ಎದುರಿಸಿ ದುಬೈಯ ನಿಬಿಡ ಹೆದ್ದಾರಿಗಳಲ್ಲಿ ನಡೆದಿದ್ದೇನೆ ಎಂದು 'ಖಲೀಜ್ ಟೈಮ್ಸ್'ನೊಂದಿಗೆ ಮಾತನಾಡಿದ ಸೆಲ್ವರಾಜ್ ಹೇಳುತ್ತಾರೆ.

ದುಬೈಯ ಹೊರವಲಯದಲ್ಲಿರುವ ಸೋನಾಪುರ್‌ನಲ್ಲಿ ಅವರು ತಂಗಿದ್ದಾರೆ. ದುಬೈನಲ್ಲಿರುವ ಕಾರ್ಮಿಕ ನ್ಯಾಯಾಲಯಕ್ಕೆ ಹೋಗಲು ಅವರು 22 ಕಿ.ಮೀ. ನಡೆಯಬೇಕಾಗುತ್ತದೆ.

ಸೋನಾಪುರದಿಂದ ಕರಮಕ್ಕೆ ಬಸ್‌ನಲ್ಲಿ ಪ್ರಯಾಣಿಸಿದರೆ ಕೆಲವು ದಿರ್ಹಮ್‌ಗಳನ್ನು ಕೊಡಬೇಕಾಗುತ್ತದೆ. ಆದರೆ, ಈ ಬಡ ವ್ಯಕ್ತಿಯಲ್ಲಿ ಅಷ್ಟು ಹಣವಿಲ್ಲ. 22 ಕಿಲೋ ಮೀಟರ್ ದೂರವನ್ನು ಕ್ರಮಿಸಲು ಅವರು 2 ಗಂಟೆ ನಡೆಯಬೇಕಾಗುತ್ತದೆ ಹಾಗೂ ಹಿಂದಿರುಗಲು ಮತ್ತೆ ಎರಡು ಗಂಟೆಗಳ ಕಾಲ ನಡೆಯಬೇಕಾಗುತ್ತದೆ.

ಅವರು ಹೀಗೆ ಎರಡು ವಾರಗಳಿಗೊಮ್ಮೆ ನಾಲ್ಕು ಗಂಟೆಗಳಲ್ಲಿ 54 ಕಿಲೋಮೀಟರ್ ದೂರವನ್ನು ಕ್ರಮಿಸುತ್ತಾರೆ. ಅವರ ಪ್ರಕರಣದಲ್ಲಿ ತೀರ್ಪು ಬರುವವರೆಗೆ ಅವರು ಹೀಗೆ ನಡೆಯಲೇ ಬೇಕಾಗಿದೆ.

ತಮಿಳುನಾಡಿನ ತಿರುಚಿರಾಪಳ್ಳಿ ನಿವಾಸಿಯಾಗಿರುವ ಸೆಲ್ವರಾಜ್‌ರ ತಾಯಿ ಊರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರಿಗೆ ಅನುಮತಿ ಸಿಗಲಿಲ್ಲ. ಅಂದಿನಿಂದ ಅವರು ಕಾರ್ಮಿಕ ನ್ಯಾಯಾಲಯಕ್ಕೆ ಎಡತಾಕುತ್ತಿದ್ದಾರೆ.

''ನಾನು ಮುಂಜಾನೆ ಬೇಗ ನಡೆಯಲು ಆರಂಭಿಸುತ್ತೇನೆ. ಬಸ್ ಟಿಕೆಟ್ ಖರೀದಿಸಲು ಅಥವಾ ಮೆಟ್ರೊದಲ್ಲಿ ಹೋಗಲು ನನ್ನಲ್ಲಿ ಹಣವಿಲ್ಲ. ನನಗೆ ಯಾರೂ ಸಹಾಯ ಮಾಡಲಿಲ್ಲ. ಆದರೆ, ಎರಡು ವರ್ಷಗಳ ಅವಧಿಯಲ್ಲಿ ನಾನು ಕನಿಷ್ಠ 20 ಬಾರಿ ನ್ಯಾಯಾಲಯಕ್ಕೆ ಹಾಜರಾಗಿರಬೇಕು'' ಎಂದು ಅವರು ಹೇಳುತ್ತಾರೆ.

''ಊರಿಗೆ ಹೋಗಲು ಅವರಿಗೆ ವಿಮಾನ ಟಿಕೆಟ್ ಬೇಕು. ಪಾರ್ಕ್‌ನಲ್ಲಿ ವಾಸಿಸುತ್ತಿದ್ದ ಅವರ ಎಲ್ಲ ಸ್ನೇಹಿತರು ಮನೆಗೆ ಹೋಗಿದ್ದಾರೆ. ಅವರು ಭಾರತಕ್ಕೆ ನಡೆದುಕೊಂಡೇ ಹೋಗಲು ಸಾಧ್ಯವಿಲ್ಲ'' ಎಂದು ಸೆಲ್ವರಾಜ್‌ರಿಗೆ ಸಹಾಯ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News