×
Ad

ಕರುನಾಡ ಕುಡಿಗಳಿಂದ ಝೇಂಕರಿಸಿದ ಇಶಿ ಬಿಲಾದಿ.... ನಿನಾದ

Update: 2016-12-06 21:41 IST

ನೀವು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಜೀವಿಸುತ್ತಿರುವ ಯಾರನ್ನಾದರೂ ಕೇಳಿ ನೋಡಿ. ಅಲ್ಲಿ ನೆಲೆಸಿರುವ ಎಲ್ಲಾ ದೇಶಗಳ ಜನರು ಅಲ್ಲಿನ ಪ್ರಜೆಗಳ ಜೊತೆ ಒಂದಾಗಿ ಹುಮ್ಮಸ್ಸಿನಿಂದ ಆಚರಿಸುವ ದಿನಾಚರಣೆ  ಯಾವುದೆಂದು.. …?  ಎಲ್ಲರ ಒಕ್ಕೊರಲ ಉತ್ತರ ಒಂದೇ ಎಂಬುದು ದಿಟ.  ಅದು ಬೇರಾವುದೂ ಅಲ್ಲ ಯುಎಇ ರಾಷ್ತ್ರೀಯ ದಿನಾಚರಣೆ. 

ಹೌದು... ಡಿಸೆಂಬರ್ ಸಮಾಗತವಾಗುತ್ತಿದ್ದಂತೆ ಎಲ್ಲಾ ಎಮಿರೇಟ್ ಗಳು ಮೈಕೊಡವಿ ಎದ್ದು ಬಿಡುತ್ತದೆ.

ನಗರಗಳೆಲ್ಲಾ ಮದುವಣಗಿತ್ತಿಯಂತೆ  ಸಜ್ಜಾಗಿ ಬಿಡುತ್ತದೆ.  ಮನೆ ಮನೆಗಳಲ್ಲಿ ಬೀದಿ ಬೀದಿಗಳಲ್ಲಿ ರಾಷ್ತ್ರ ಧ್ವಜ ಹಾರಡುತಿರುತ್ತದೆ, ಗಗನ ಚುಂಬಿ ಕಟ್ಟಡಗಳು ವಿದ್ಯುತಾಲಂಕಾರ, ಲೇಸರ್ ಲೈಟಿಂಗ್ ಗಳಿಂದ ಶೋಭಿಸುತಿದ್ದರೆ, ವಾಹನಗಳ ಕಥೆ ಕೇಳುವುದೇ ಬೇಡ… ವಾಹನ ಗಳನ್ನು  ಅಲಂಕರಿಸುವುದರಲ್ಲಿ ಇಲ್ಲಿ ನಡೆಯುವ ಪೈಪೋಟಿ ವಿಶ್ವದ ಇನ್ನಾವ ಕಡೆಯಲ್ಲಿ ಕಾಣಲು ಅಸಾಧ್ಯ. ಒಟ್ಟಿನಲ್ಲಿ ಇಡೀ ನಗರಕ್ಕೆ ನಗರವೇ ಅಪ್ಯಾಯಮಾನವಾಗಿ ಕಾಣಿಸುತ್ತದೆ. ರಾಷ್ಟ್ರೀಯ ದಿನಾಚರಣೆಯ ದಿನ ಬಂತೆಂದರೆ ಇಲ್ಲಿ ಹಬ್ಬದ ವಾತಾವರಣ, ಪ್ರಾಯಶ: ಎಲ್ಲಾ ಹಬ್ಬಗಳಿಗಿಂತ ಹೆಚ್ಚಾಗಿ ಇಲ್ಲಿಯ ಜನರು ಸಾರ್ವಜನಿಕವಾಗಿ ವಿಜೃಂಭಣೆಯಿಂದ ಆಚರಿಸುವ ದಿನ ಇದೆಂದರೆ ಅತಿಶಯೋಕ್ತಿಯೂ ಕ್ಲೀಷೆಯೂ ಆಗಲಾರದು..

ಈ ತಿಂಗಳಿನಲ್ಲಿ ನೀವು ಮಿಕ್ಸ್ ಎಫೆಮ್ ಯುಎಇ, ಅಬುಧಾಬಿ ರೇಡಿಯೋ, ಅಲ್ ರಾಬಿಯಾ, ಅಲ್ ಎಮರಾತ್, ನೂರ್ ದುಬೈ, ಅಲ್ ಖಲೀಜಿಯಾ.. ಹೀಗೆ ಎಲ್ಲಾ  ರೇಡಿಯೋ ಟ್ಯೂನ್ ಮಾಡಿ  ನೋಡಿದರೆ , ನಿಮಗೆ ಅಲ್ಲಿ ಚರ್ಚಿತ ವಿಷಯ ಒಂದೇ ಅದು ಅರಬ್ ಸಂಯುಕ್ತ ಸಂಸ್ಥಾನ ನಡೆದುಬಂದ ಹಾದಿಯ ಅವಲೋಕನ, ಮೈಲಿಗಲ್ಲುಗಳ ನೆನಕೆ. ಇಲ್ಲಿನ ಪ್ರಜೆಗಳು  ಮತ್ತು ಪ್ರವಾಸಿಗಳು ರಾಷ್ತ್ರಪಿತ ಶೇಖ್ ಝಯೆದ್ ನ ಕೊಡುಗೆಯನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸದೆ ಅದರಲ್ಲಿ ಒಂದೇ ಒಂದು ಕಾರ್ಯಕ್ರಮ ಕೊನೆಗೊಳ್ಳುವುದಿಲ್ಲ.

ಈ ಬಾರಿ ಪ್ರತಿವರ್ಷದಂತೆ ಅಬುದಾಬಿಯ ಕಾರ್ನಿಶ್ ಬೀಚ್ ಬದಿಯಲ್ಲಿ ನಡೆಯುವ ವರ್ಣರಂಜಿತ ವಾಹನ ಜಾಥಾ, ಎಮಿರೇಟ್ಸ್ ಪ್ಯಾಲೇಸ್ ಮತ್ತು ಅಲ್ ಮಾರಿಯಾ ಐಲ್ಯಾಂಡ್ ನಲ್ಲಿ ನಡೆಯುವ ಫೈರ್ ವರ್ಕ್, ಎಲ್ಲವನ್ನೂ ಪ್ರತಿ ಭಾರಿಯಂತೆ ವೀಕ್ಷಿಸಿದ್ದೆ. ಆದರೆ ಈ ಭಾರಿ  ಎಲ್ಲವನ್ನೂ ಮಂಕಾಗಿಸಿ ನನ್ನ ಮನಸ್ಸಿಗೆ ಹತ್ತಿರವಾದದ್ದು ಕನ್ನಡಿಗ ಚಿಣ್ಣರ ಕಲಾ ಕಲರವ.

ಅಕ್ಕನ ಮಕ್ಕಳಿಗೆ ಈ ಬಾರಿಯ ರಾಷ್ಟ್ರೀಯ ದಿನಾಚರಣೆಯ ಹರ್ಷ ಹಿಂದಿನ ವರ್ಷಗಳಿಗಿಂತ ಇಮ್ಮಡಿ ಯಾಗಿತ್ತು ಬೆಳ್ಳಂಬೆಳಗ್ಗೆ  ಯುಎಇ ರಾಷ್ಟ್ರಧ್ವಜದ ಬಣ್ಣದ ಉಡುಪುಗಳನ್ನು ತೊಟ್ಟು ಸಜ್ಜಾಗಿದ್ದರು. ಇದಕ್ಕೆ ಮೂಲ ಕಾರಣ  ಕೆಸಿಎಫ್ . ಕರ್ನಾಟಕ ಕಲ್ಚರಲ್ ಫೌಂಡೇಶನ್ ಪ್ರತಿಭೋತ್ಸವ ಹಮ್ಮಿ ಕೊಳ್ಳುವ ಮೂಲಕ ಈ ಸಾಲಿನ  ಯುಎಇ ರಾಷ್ಟ್ರೀಯ ದಿನಾಚರಣೆಯನ್ನು ಅವಿಸ್ಮರಣೀಯಗೊಳಿಸಿತು.

ಅನಿವಾಸಿ ಕನ್ನಡಿಗ ಮಕ್ಕಳಿಗಾಗಿ ಜನರಲ್, ಸೀನಿಯರ್ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಿಗೆ ಪ್ರತ್ಯೇಕವಾಗಿ ವಿವಿಧ ಭಾಷೆಗಳಲ್ಲಿ ಭಾಷಣ, ಹಾಡು, ಪೆನ್ಸಿಲ್ ಡ್ರಾಯಿಂಗ್  ಕ್ವಿಜ್ ಆಯೋಜಿಸಿತ್ತು. ಕೆ ಸಿ ಎಫ್ ಸಭಾಂಗಣ ಎಂದಿನಂತಿರಲಿಲ್ಲ . ಅಲ್ಲಿ ತುಂಬಾ ಚಿಣ್ಣರ ಕಲರವ ನೋಡುಗರ ಕಣ್ಣಿಗೆ ಹಬ್ಬ. ಅಂದಹಾಗೆ ಇದನ್ನು ಓದುಗರ ಜೊತೆ ಹಂಚಿಕೊಳ್ಳೋಣ ಎನ್ನುತ್ತಾ ಆಫೀಸ್ ಕೆಲಸಗಳನ್ನೆಲ್ಲ ಬದಿಗಿಟ್ಟು ಲ್ಯಾಪ್ ಟಾಪ್ ಕೀಲಿಮಣೆಯತ್ತ ಕಯ್ಯಾಡಿಸಿದೆ. ಅನಿವಾಸಿ ಕನ್ನಡಿಗ ಮಕ್ಕಳಿಗೆ ತಮ್ಮ ಊರಿನ ಗಡಣದ ಮುಂದೆ ತಮ್ಮ ಪ್ರತಿಭಾ ಪ್ರದರ್ಶನ ನಡೆಸಲು ಸಿಗುವ ವೇದಿಕೆಗಳು ಅತ್ಯಪೂರ್ವ. ಇಂತಹ  ಆಶಾದಾಯಕ ಬೆಳವಣಿಗೆಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಅನಿವಾಸಿ ಕನ್ನಡಿಗರ ಕರ್ತವ್ಯ ಎಂದರೆ ತಪ್ಪಾಗಲಾರದು.

 ‘’ವೆಲ್ ಬಿಗಿನಿಂಗ್  ಈಸ್ ಹಾಫ್ ಡನ್’’ ಎಂಬ ಆಂಗ್ಲ ಸೂಕ್ತಿ ಯಂತೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಆಯೋಜಿಸಿದ್ದ ಪ್ರತಿಭೋತ್ಸವ ಕಾರ್ಯಕ್ರಮದ ಪ್ರಾರಂಭ ಅನಿವಾಸಿ ಕನ್ನಡಿಗ ಮಕ್ಕಳ ಇಶಿ ಬಿಲಾದಿ ಗೀತೆಯೊಂದಿಗೆಯಾಗಿತ್ತು. ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ  ಸಭಿಕರನ್ನು ಕೊನೆಯ ಹಂತದ ವರೆಗೆ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಯಶಸ್ವಿಯಾದರು.   

ಅಂದಹಾಗೆ ಇಶಿ ಬಿಲಾದಿ….. ಯುಎಇ ಯ ರಾಷ್ಟ್ರಗೀತೆ. 1971 ರಲ್ಲಿ ಅರಬ್ ಸಂಯುಕ್ತ ಸಂಸ್ಥಾನವು ಅಸ್ತಿತ್ವಕ್ಕೆ ಬಂದಾಗ ಮೊಹಮ್ಮದ್ ಅಭ್ಡೆಲ್ ವಹಾಬ್ ಸಂಗೀತ ಸಂಯೋಜನೆ ಮಾಡಿದ್ರೆ , 1996 ರಲ್ಲಿ ಆರಿಫ್ ಅಲ್ ಶೈಖ್ ಅಬ್ದುಲ್ ಅಲ್ ಹಸನ್  ಈ ದೇಶಭಕ್ತಿಯ  ಮಣಿಮುತ್ತುಗಳನ್ನು ಪೋಣಿಸಿ ಗೀತೆ ರಚಿಸಿದ್ದರು.

ಅಂದಹಾಗೆ ಮೂಲತಃ  ಈಜಿಪ್ಟ್ ನವರಾದ ಸಂಗೀತ ಸಂಯೋಜಕ ಮೊಹಮ್ಮದ್ ಅಭ್ಡೆಲ್ ವಹಾಬ್ ಯುಎಇ ಯ ರಾಷ್ಟ್ರಗೀತೆ  ಮಾತ್ರವಲ್ಲದೆ ಲಿಬಿಯಾ ( 'ಯಾ ಬಿಲಾದಿ. . ಲಿಬಿಯಾ ಲಿಬಿಯಾ ಲಿಬಿಯಾ') ಮತ್ತು ಟ್ಯುನಿಷಿಯಾ (ಹುಮತ್ ಅಲ್ ಹಿಮಾ ) ದೇಶಕ್ಕೂ ಸಂಗೀತ ಸಂಯೋಜನೆ ಮಾಡಿರುವುದು ಅವರ ಪ್ರಾವಿಣ್ಯತೆಗೆ ಹಿಡಿದ ಕೈಗನ್ನಡಿ.

 ಕಾರ್ಯಕ್ರಮದುದ್ದಕ್ಕೂ ಮಕ್ಕಳ ಮುಖದಲ್ಲಿ ಉತ್ಸಾಹ ಚಿಮ್ಮುತಿತ್ತು.. ಪುಟ್ಟ ಪುಟ್ಟಕಂದಮ್ಮಗಳು ವಿವಿಧ ತೆರನಾದ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಿವಾಸಿ ಕನ್ನಡಿಗರ ಮುಂದೆ ಅನಾವರಣ ಮಾಡಿದರು. ಇಂತಹ ವೇದಿಕೆಗಳು ಮಕ್ಕಳ ಸಾಮರ್ಥ್ಯವನ್ನು ಒರೆಗೆ ಹಚ್ಚುವಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಬಲ್ಲುದು ಎಂಬುದರಲ್ಲಿ ಎರಡು ಮಾತಿಲ್ಲ;   ಈ ಕಾರ್ಯಕ್ರಮದ ಯಶಸ್ವಿಗೆ ಅಹರ್ನಿಶಿ ದುಡಿದು ಅಬುದಾಬಿಯಲ್ಲಿ ನೆಲೆಸಿರುವ ಕನ್ನಡಿಗ ವಿದ್ಯಾರ್ಥಿಗಳ ಪೋಷಕರನ್ನು ಭೇಟಿಮಾಡಿ ಎಲ್ಲರನ್ನು ಕಾರ್ಯಕ್ರಮಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ದಾವೂದ್ ಮಾಸ್ಟರ್, ಉಮರ್ ಕಾಣಿಯೂರ್, ಅಮಾನಿ ಅಜ್ಜಾವರ, ಹಕೀಮ್ ತುರ್ಕಳಿಕೆ, ಕಬೀರ್ ಬಾಯಂಬಾಡಿ, ನಾಸಿರ್ ಗಾಳಿಮುಖ ನಿಜಕ್ಕೂ ಸ್ತುತ್ಯರ್ಹರು. ಇಂತಹ  ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ. ಕನ್ನಡದ ಪುಟಾಣಿಗಳು ದೇಶ ವಿದೇಶಗಳಲ್ಲಿ ತಮ್ಮ ಕಂಪನ್ನು ಸೂಸಲಿ ಎಂಬುದೇ ಎಲ್ಲ  ಅನಿವಾಸಿ ಕನ್ನಡಿಗರ ಹರಕೆ ಹಾರೈಕೆ.

Writer - ಯಹ್ಯಾ ಅಬ್ಬಾಸ್ ಉಜಿರೆ

contributor

Editor - ಯಹ್ಯಾ ಅಬ್ಬಾಸ್ ಉಜಿರೆ

contributor

Similar News