ಸೌದಿಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ

Update: 2016-12-07 09:42 GMT

ರಿಯಾದ್, ಡಿ. 7: ಸೌದಿ ಅರೇಬಿಯದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಸ್ಥಳೀಯಾಡಳಿತ ಇಲಾಖೆಯನ್ನು ಉದ್ಧರಿಸಿ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.ಪ್ಲಾಸ್ಟಿಕ್, ಟಿನ್. ನೈಲಾನ್ ಶೀಟ್‌ಗಳಲ್ಲಿ ಆಹಾರ ಪದಾರ್ಥಗಳನ್ನು ನೀಡುವುದನ್ನು ನಿಷೇಧಿಸಿ ರೂಪಿಸಲಾದ ಕಾನೂನು ಕೂಡಲೆ ಜಾರಿಗೆ ಬರಲಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಪ್ಯಾಕಿಂಗ್ ವಸ್ತುಗಳಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸ್ಥಳೀಯಾಡಳಿತ ಸಚಿವಾಲಯ ವಿಶೇಷ ತಂಡವನ್ನು ನೇಮಿಸಿದೆ. ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರ ಆರೋಗ್ಯವನ್ನು ಪರಿಗಣಿಸಿ ಸೌದಿಯ ಸ್ಥಳೀಯಾಡಳಿತ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.

ಹೋಟೆಲ್‌ಗಳು. ಆಹಾರದ ಅಂಗಡಿಗಳು, ಬೇಕರಿಗಳು ಆಹಾರ ಪ್ಯಾಕೆಟ್‌ಗಳನ್ನು ಸ್ವೀಕರಿಸಬೇಕಾದ ರೀತಿಗೆ ಸಂಬಂಧಿಸಿ ಶೀಘ್ರದಲ್ಲಿ ನಿಯಮಾವಳಿಗಳನ್ನು ಹೊರಡಿಸಲಾಗುತ್ತದೆ. ಪ್ಲಾಸ್ಟಿಕ್‌ಗೆ ಬದಲಾಗಿ ಪ್ಯಾಕಿಂಗ್‌ಗೆ ಬಳಸುವ ವಸ್ತುವಿನ ಕುರಿತು ಅದರಲ್ಲಿ ವಿವರಿಸಲಾಗುತ್ತದೆ.

ಖುಬ್ಸ್(ರೊಟ್ಟಿ) ಬೇಕರಿಗಳು ಪ್ಲಾಸ್ಟಿಕ್ ಬದಲು ಕಾಗದ ಬಳಸಬೇಕೆಂದು ಅಧ್ಯಯನ ತಂಡ ಸಲಹೆ ನೀಡಿದೆ. ಸ್ಥಳೀಯಾಡಳಿತ ಸಚಿವಾಲಯ, ಆರೋಗ್ಯ, ಪರಿಸರ ಸಚಿವಾಲಯಗಳ ಹಾಗೂ ಆರೋಗ್ಯ ಕ್ಷೇತ್ರದ ತಜ್ಞರು ಅಧ್ಯಯನ ತಂಡದಲ್ಲಿದ್ದು ಹೊಸ ಕಾನೂನಿಗೆ ಪೂರ್ವಭಾವಿಯಾಗಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿಯನ್ನು ಕೂಡಾ ಆಯೋಜಿಸಲಾಗಿದೆ. ದೇಶದ ಒಟ್ಟು 13 ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಹಂತ ಹಂತವಾಗಿ ಜಾರಿಗೆ ತರಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News