ಸೌದಿಯಲ್ಲಿ ನ್ಯಾಯಧೀಶರನ್ನು ಅಪಹರಿಸಿದ ಮುಖವಾಡಧಾರಿಗಳು: ವ್ಯಾಪಕ ಶೋಧ
ದಮ್ಮಾಮ್,ಡಿ. 15: ಪೂರ್ವ ಸೌದಿಯ ಹಿರಿಯ ನ್ಯಾಯಾಧೀಶರೊಬ್ಬರನ್ನು ಮುಖವಾಡ ಧರಿಸಿ ಬಂದ ಶಸ್ತಾಧಾರಿ ತಂಡವೊಂದು ಅಪಹರಿಸಿದ ಘಟನೆ ವರದಿಯಾಗಿದೆ. ಖತೀಫ್ ಕೋರ್ಟಿನ ನ್ಯಾಯಾಧೀಶ ಶೇಖ್ ಮುಹಮ್ಮದ್ ಅಲ್ ಜೀರಾನಿ ಯವರನ್ನು ಮಂಗಳವಾರ ಬೆಳಗ್ಗೆ ಒಂಬತ್ತು ಗಂಟೆಯ ವೇಳೆಗೆ ತಾರೂತ್ ದ್ವೀಪದ ಮನೆಯ ಹತ್ತಿರದಿಂದ ಅಪಹರಿಸಲಾಗಿದೆ.
ಘಟನೆಯ ನಂತರ ಪ್ರದೇಶದಾದ್ಯಂತ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಮುಖ್ಯರಸ್ತೆ ಮತ್ತು ಒಳರಸ್ತೆಗಳನ್ನು ವರೆಗೂ ರಸ್ತೆಯನ್ನು ಮುಚ್ಚಲಾಗಿದೆ. ಎಲ್ಲವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ. ಶಂಕಿತ ಕೇಂದ್ರಗಳಿಗೆ ದಾಳಿ ನಡೆಸಲಾಗುತ್ತಿದೆ.
ಜಡ್ಜ್‌ರ ಅಪಹರಣದ ಬಗ್ಗೆ ಕಾನೂನು ಸಚಿವ ವಲೀದ್ ಬಿನ್ ಮುಹಮ್ಮದ್ ಅಲ್ ಸಮಾನಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಪತ್ತೆಗೆ ಮನುಷ್ಯರಿಂದ ಮಾಡಬಹುದಾದ ಎಲ್ಲವನ್ನೂ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ತಾರೂತ್ ನಗರ ಸಭೆ ಮೇಯರ್ ಅಬ್ದುಲ್ ಹಲೀಂ ಖಿದ್ರ್ ಘಟನೆಯನ್ನು ಖಂಡಿಸಿದ್ದಾರೆ. ಜೀರಾನಿಯ ಮನೆಯ ಮುಂದೆ ಕಾರಿನ ಸಮೀಪದಲ್ಲಿ ಅವರ ಪಾದರಕ್ಷೆಗಳು ಚದುರಿಕೊಂಡು ಬಿದ್ದಿದ್ದವು. ಬಲವಂತವಾಗಿ ಅವರನ್ನು ಎಳೆದೊಯ್ಯಲಾಗಿದೆ ಎಂಬುದನ್ನು ಇದು ತೋರಿಸುತ್ತಿವೆ ಎಂದು ಮೇಯರ್ ಹೇಳಿದ್ದಾರೆ.
ಘಟನೆಯ ಪ್ರತ್ಯಕ್ಷದರ್ಶಿಯಾದ ಜೀರಾನಿಯ ಪತ್ನಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಬೆಳಗ್ಗೆ ಹೊರಗೆ ಹೊರಡಲು ಸಿದ್ಧವಾಗಿ ಪತ್ನಿಗಾಗಿ ಕಾರಿನಲ್ಲಿ ಕಾದುಕುಳಿತಿದ್ದಾಗ ಮುಖವಾಡಧಾರಿಗಳು ಬಂದು ಜೀರಾನಿಯನ್ನು ಅಪಹರಿಸಿದ್ದರು. ತಾರೂತ್ ನಗರದಲ್ಲಿ ಬಿಗಿ ತಪಾಸಣೆ ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.