ಯಮನ್: 2 ವಾರಗಳಲ್ಲಿ ನೂತನ ಯುದ್ಧ ವಿರಾಮ :ಜಾನ್ ಕೆರಿ ವಿಶ್ವಾಸ

Update: 2016-12-19 15:21 GMT

ರಿಯಾದ್, ಡಿ. 19: ಯಮನ್ ಸಂಘರ್ಷಕ್ಕೆ ಸಂಬಂಧಿಸಿ ಇನ್ನೆರಡು ವಾರಗಳಲ್ಲಿ ನೂತನ ಯುದ್ಧವಿರಾಮ ಮೂಡಿಬರಬಹುದು ಎಂಬ ವಿಶ್ವಾಸವನ್ನು ಅಮೆರಿಕದ ವಿದೇಶ ಕಾರ್ಯದರ್ಶಿ ಜಾನ್ ಕೆರಿ ರವಿವಾರ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ವಿದೇಶ ಕಾರ್ಯದರ್ಶಿಯಾಗಿ ಸೌದಿ ಅರೇಬಿಯಕ್ಕೆ ಕೊನೆಯ ಭೇಟಿ ನೀಡಿದ ಕೆರಿ, ಯಮನ್ ಸಂಘರ್ಷಕ್ಕೆ ನೂತನ ವಿರಾಮವನ್ನು ತರಲು ಬ್ರಿಟನ್, ಯುಎಇ ಮತ್ತು ಸೌದಿ ಅರೇಬಿಯದ ಜೊತೆಗೂಡಿ ಅಮೆರಿಕ ಕೆಲಸ ಮಾಡುವುದು ಎಂದು ಹೇಳಿದರು.

ಕಳೆದ ವರ್ಷದ ಆರಂಭದಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ ಇದು ಎಂಟನೆ ಯುದ್ಧವಿರಾಮ ಪ್ರಯತ್ನವಾಗಿರುತ್ತದೆ.

ಯುದ್ಧದ ಸಂದರ್ಭದಲ್ಲಿ ಲಕ್ಷಾಂತರ ಯಮನ್ ಪ್ರಜೆಗಳು ನಿರ್ವಸಿತರಾಗಿದ್ದಾರೆ ಹಾಗೂ ಅವರಿಗೆ ತುರ್ತಾಗಿ ಮಾನವೀಯ ನೆರವು ಬೇಕಾಗಿದೆ ಎಂದು ಅವರು ಹೇಳಿದರು.

‘‘ನಮ್ಮ ಸರ್ವ ಸಾಮರ್ಥ್ಯವನ್ನು ಉಪಯೋಗಿಸಿ ನಾವು ಇದನ್ನು ಮಾಡಲಿದ್ದೇವೆ’’ ಎಂದರು.


‘‘ಅಲ್ಲಿ ಮಾನವೀಯ ಪರಿಸ್ಥಿತಿ ದಯನೀಯವಾಗಿದೆ ಹಾಗೂ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಯುದ್ಧವನ್ನು ಮುಕ್ತಾಯಗೊಳಿಸಬೇಕಾದ ತುರ್ತು ಅಗತ್ಯ ಈಗ ಇದೆ. ಅದಕ್ಕಾಗಿ ಸಂಬಂಧ ಪಟ್ಟ ಎಲ್ಲ ಪಕ್ಷಗಳು ಮಾತುಕತೆಯ ಮೇಜಿಗೆ ಬರಬೇಕಾಗಿದೆ’’ ಎಂದು ಕೆರಿ ನುಡಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News