ಭಯೋತ್ಪಾದನೆ ಪ್ರಕರಣಗಳಲ್ಲಿ ಯುಎಪಿಎ ಸಹಜ: ಪಿಣರಾಯಿ
Update: 2016-12-24 15:38 IST
ದುಬೈ,ಡಿ.24: ರಾಜಕೀಯ ವಿರೋಧಿಗಳ ವಿರುದ್ಧ ‘ಕಾಪ್ಪ’ ಕಾನೂನು ಹೇರದಿರುವುದು ಸರಕಾರದ ನೀತಿ. ಆದರೆ ಭಯೋತ್ಪಾದನೆ ಪ್ರಕರಣಗಳಲ್ಲಿ ಬಂಧಿಸಿದಾಗ ಯುಎಪಿಎ ಹೇರುವುದು ಸಹಜ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದು ರಾಜ್ಯಸರಕಾರದ ತೀರ್ಮಾನವಲ್ಲ. ಪ್ರಜಾಪ್ರಭುತ್ವದ ಹಕ್ಕುಗಳನ್ನು ನಿಷೇಧಿಸುವ ಯುಎಪಿಎ ಕಾನೂನು ಬಗ್ಗೆ ನಮ್ಮ ಸಹಮತವಿಲ್ಲ ಎಂದು ದುಬೈಯಲ್ಲಿ ಪತ್ರಕರ್ತರ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಿದ್ದಾರೆ.
ಭ್ರಷ್ಟಾಚಾರ ತಡೆಯಲು ಸ್ಥಾಪಿತ ಹಿತಾಸಕ್ತಿಗಳು ಅಡ್ಡಿಯಾಗಿವೆ ಎಂದು ವಿಜಿಲೆನ್ಸ್ ಎಡಿಜಿಪಿ ಎನ್.ಶಂಕರ್ ರೆಡ್ಡಿ ಆರೋಪವನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದಾಗ ಅರೋಪ ಕೇಳಿ ಬರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿರುವ ಆರೆಸ್ಸೆಸ್ ಪ್ರಭಾವ ಕುರಿತ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಿಲ್ಲ ಎಂದು ವರದಿ ತಿಳಿಸಿದೆ.