×
Ad

ಭಾರತೀಯ ನೋಟು ರದ್ದತಿಯಿಂದ ದುಬೈ ಚಿನ್ನದ ಮಾರುಕಟ್ಟೆಗೆ ಹೊಡೆತ!

Update: 2016-12-28 19:13 IST

ದುಬೈ, ಡಿ.28: ನವೆಂಬರ್ 8ರ ನೋಟು ರದ್ದತಿ ಘೋಷಣೆಯಿಂದಾಗಿ, ದುಬೈಯ ಪ್ರಮುಖ ಚಿನ್ನದ ಮಾರುಕಟ್ಟೆ ಗೋಲ್ಡ್ ಸೌಕ್‌ಗೆ ಭಾರತೀಯ ಗ್ರಾಹಕರ ಭೇಟಿ ಸಂಪೂರ್ಣ ನಿಂತಿದೆಯೆಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಚಿನ್ನದ ಮಾರುಕಟ್ಟೆಯಲ್ಲಿ ಒಂದೇ ಅಂಗಡಿ ನಿರ್ವಾಹಕರಿಗೆ ಪ್ರಧಾನಿ ನರೇಂದ್ರ ಮೋದಿಯವರ ನೋಟು ರದ್ದತಿ ನಿರ್ಧಾರ ಕೆಟ್ಟ ಸುದ್ದಿಯಾಗಿದೆ. ವರ್ಷಕ್ಕೆ ಶೇ.15ರಿಂದ 20ರಷ್ಟು ಚಿನ್ನದ ವ್ಯಾಪಾರ ಭಾರತೀಯ ಹಣದ ಮೂಲಕವೇ ನಡೆಯುತ್ತಿತ್ತು. ಆದರೆ, ಈ ವರ್ಷ ಅದಕ್ಕೆ ಬೃಹತ್ ಹಿನ್ನಡೆಯಾಗಿದೆ.

ನೋಟು ರದ್ದತಿ ಘೋಷಿಸಿದ ನ.8ರ ಬಳಿಕ ಭಾರತದಲ್ಲಿ ಚಿನ್ನದ ವ್ಯಾಪಾರ ಕುಸಿತದ ಸಂಪೂರ್ಣ ಪ್ರತಿಬಿಂಬ ಇಲ್ಲಿಯೂ ಕಾಣಿಸಿದೆಯೆಂದು ದುಬೈಯ ಸ್ಕೈ ಜುವೆಲರಿಯ ಮಹಾ ಪ್ರಬಂಧಕ ಸಿರಿಯಾಕ್ ವರ್ಗೀಸ್ ತಿಳಿಸಿದ್ದಾರೆ.

ಗೋಲ್ಡ್ ಸೌಕ್‌ನ ಹೊರಗಡೆ, ಪ್ರದೇಶದಲ್ಲಿರುವ ಬುರ್ ದುಬೈಯಂತಹ ಚಿನ್ನದಂಗಡಿಗೂ, ಕೊಳ್ಳುವ ಆಸಕ್ತಿಯಿಂದ ಭೇಟಿ ನೀಡುವ ಭಾರತೀಯರ ಸಂಖ್ಯೆ ಕುಸಿದಿದೆಯೆಂದು ಅವರು ಗಲ್ಫ್ ನ್ಯೂಸ್‌ಗೆ ಹೇಳಿದ್ದಾರೆ.

ಕಳೆದ ವಾರದಂತೆ ಚಿನ್ನದ ಬೆಲೆ ಕುಸಿದಾಗೆಲ್ಲ ದುಬೈ ಸ್ವರ್ಣ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಆಧಾರದ ವ್ಯವಹಾರ ಶೇ.15-20ಕ್ಕೂ ಹೆಚ್ಚಿರುತ್ತದೆ. ಆದರೆ, ಈ ವರ್ಷ ಅಂತಹ ಪ್ರವೃತ್ತಿಯಿಲ್ಲ.

ಆದಾಗ್ಯೂ, ಇತ್ತೀಚಿನ ವಾರಗಳಲ್ಲಿ ಚೀನದ ಸಂದರ್ಶಕರು ಚಿನ್ನ ಖರೀದಿಯಲ್ಲಿ ಹೆಚ್ಚು ಸಕ್ರಿಯವಾಗಿರುವುದರಿಂದ ಸ್ವಲ್ಪ ಪರಿಹಾರ ದೊರೆತಿದೆಯೆಂದು ಚಿಲ್ಲರೆ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಆದರೆ, ಇದು ಭಾರತೀಯರ ಖರೀದಿಯ ಮಟ್ಟಕ್ಕೆ ಬರುವುದಿಲ್ಲ. ಚೀನಿಯರು 22 ಕ್ಯಾರೆಟ್‌ನ ಬದಲಿಗೆ 18 ಕ್ಯಾರೆಟ್‌ನ ಚಿನ್ನ ಖರೀದಿಸುತ್ತಾರೆ. ಭಾರತೀಯರು ದುಬೈಗೆ ಭೇಟಿ ನೀಡುವಾಗ ಭಾರೀ ಪ್ರಮಾಣದ ಭಾರತೀಯ ಹಣವನ್ನು ಒಯ್ಯುತ್ತಾರೆ. ಅದನ್ನೆಲ್ಲ ವಿನಿಮಯಿಸಿ, ಚಿನ್ನಾಭರಣಗಳ ರೂಪದಲ್ಲಿ ಪರಿವರ್ತಿಸಿಕೊಳ್ಳುತ್ತಾರೆಂದು ದುಬೈ ಚಿನ್ನ ಹಾಗೂ ಆಭರಣ ಗುಂಪಿನ ಬೋರ್ಡ್ ಸದಸ್ಯ ಅಬ್ದುಲ್ ಸಲಾಂ ಕೆ.ಪಿ. ಎಂಬವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News