×
Ad

ಸೌದಿ: ಹಜ್ ನಿಯೋಗಗಳೊಂದಿಗೆ ಸಭೆ ವೇಳಾಪಟ್ಟಿ ಘೋಷಣೆ

Update: 2016-12-30 20:10 IST

ಜಿದ್ದಾ, ಡಿ. 30: ಹಜ್ ಯಾತ್ರಿಗಳಿಗೆ ಸಂಬಂಧಿಸಿದ ನಿಯಮಾವಳಿಗಳು ಮತ್ತು ವಿಧಿವಿಧಾನಗಳ ಬಗ್ಗೆ ಚರ್ಚಿಸಲು ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವಾಲಯವು ಇರಾನ್ ಸೇರಿದಂತೆ 80ಕ್ಕೂ ಅಧಿಕ ದೇಶಗಳ ಹಜ್ ವ್ಯವಹಾರಗಳ ಕಚೇರಿಗಳಲ್ಲಿ ನಿಯೋಗಗಳ ಮುಖ್ಯಸ್ಥರನ್ನು ಭೇಟಿಯಾಗಲು ವೇಳಾಪಟ್ಟಿಯನ್ನು ನಿಗದಿಪಡಿಸಿದೆ.

ಇಂಥ ಸಭೆಗಳಿಗೆ ಹಾಜರಾಗುವಂತೆ ಇರಾನ್ ಹಜ್ ನಿಯೋಗಕ್ಕೆ ಆಮಂತ್ರಣವನ್ನು ಕಳುಹಿಸಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವ ಮುಹಮ್ಮದ್ ಸಲೇಹ್ ಬಿನ್ ತಾಹಿರ್ ಬೆಂಟಿನ್ ತಿಳಿಸಿದರು.

2017ರಲ್ಲಿ ಇಸ್ಲಾಮಿಕ್ ಮತ್ತು ಮುಸ್ಲಿಮೇತರ ದೇಶಗಳಿಂದ ಬರುವ ಯಾತ್ರಿಗಳ ಆಗಮನದ ವಿಧಿವಿಧಾನಗಳ ಬಗ್ಗೆ ಚರ್ಚಿಸುವಂಗೆ ದೊರೆ ಸಲ್ಮಾನ್ ನೀಡಿರುವ ಸೂಚನೆಗಳಂತೆ ಈ ಸಭೆಗಳನ್ನು ನಡೆಸುತ್ತಿರುವುದಾಗಿ ಅವರು ಹೇಳಿದರು.

ಯಾತ್ರಿಕರಿಗೆ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಸಾಧ್ಯವಾಗುವಂತೆ ಹಜ್ ವ್ಯವಹಾರಗಳ ಕಚೇರಿಗಳಲ್ಲಿ ಜಾರಿಗೊಳಿಸುವ ನಿಯಮಾವಳಿಗಳ ಬಗ್ಗೆ ಈ ಸಭೆಗಳಲ್ಲಿ ವಿವರಗಳನ್ನು ನೀಡಲಾಗುವುದು.

ಸೌದಿ ಅರೇಬಿಯವು ಎಲ್ಲ ಯಾತ್ರಿಕರು ಮತ್ತು ಉಮ್ರಾ ನಡೆಸುವವರನ್ನು ಹಾಗೂ ಸಂದರ್ಶಕರನ್ನು ಅವರ ರಾಷ್ಟ್ರೀಯತೆ ಅಥವಾ ಪಂಥಗಳನ್ನು ಪರಿಗಣಿಸದೆ ಸ್ವಾಗತಿಸುವುದು ಎಂದು ಸಚಿವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News