×
Ad

ಸೌದಿ: ದರೋಡೆ ಪ್ರಕರಣದಲ್ಲಿ ಭಾರತೀಯನಿಗೆ ಜೈಲು, ಛಡಿ ಏಟು

Update: 2017-01-05 19:52 IST

ರಿಯಾದ್, ಜ. 5: ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ಎಂಬಿಎ ಪದವೀಧರ ಮುಹಮ್ಮದ್ ಮನ್ಸೂರ್ ಹುಸೈನ್‌ಗೆ ದರೋಡೆ ಪ್ರಕರಣವೊಂದರಲ್ಲಿ ಆ ದೇಶದ ನ್ಯಾಯಾಲಯವು ಒಂದು ವರ್ಷದ ಜೈಲುಶಿಕ್ಷೆ ಮತ್ತು 300 ಛಡಿ ಏಟಿನ ಶಿಕ್ಷೆಯನ್ನು ನೀಡಿದೆ.

ತಮ್ಮ ಮಗನನ್ನು ನೋಡಲು ತಂದೆ ಮತ್ತು ತಾಯಿ ಹೂರುನ್ನೀಸಾ ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಮ್ಮ ಮಗ ನಿರಪರಾಧಿ ಎಂದು ಅವರು ಹೇಳುತ್ತಿದ್ದಾರೆ.

ಮುಹಮ್ಮದ್ ಮನ್ಸೂರ್ ಹುಸೈನ್‌ನನ್ನು ಸೌದಿ ಅರೇಬಿಯದ ವಾಡಿ ಅಲ್ ದವಾಸಿರ್ ಜೈಲಿನಲ್ಲಿ ಇಡಲಾಗಿದೆ. ತಮ್ಮ ಮಗನನ್ನು ರಕ್ಷಿಸಲು ಮುಂದಾಗಿರುವ ತಂದೆ-ತಾಯಿ ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ರ ನೆರವನ್ನು ಕೋರಿದ್ದಾರೆ.

ವಿವರ :

ಹೈದರಾಬದ್‌ನ ಮಲಕ್‌ಪೇಟೆಯ ಮುಹಮ್ಮದ್ ಮನ್ಸೂರ್ ಹುಸೈನ್ ರಿಯಾದ್‌ನಲ್ಲಿ 2013ರಿಂದ ಮಾರ್ಕೆಟಿಂಗ್ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದರು.

ಕಳೆದ ವರ್ಷ ಆಗಸ್ಟ್ 25ರಂದು 1,06,000 ಸೌದಿ ರಿಯಾಲ್ ಮೊತ್ತವನ್ನು ಬ್ಯಾಂಕ್‌ಗೆ ಹಾಕಲು ಹೋಗುತ್ತಿದ್ದಾಗ ದುಷ್ಕರ್ಮಿಗಳು ಆತನನ್ನು ಬಂದೂಕು ತೋರಿಸಿ ಬೆದರಿಸಿ ಹಣವನ್ನು ದೋಚಿದ್ದಾರೆ ಎಂದು ಹೆತ್ತವರು ಹೇಳುತ್ತಾರೆ.

ಈ ವಿಷಯವನ್ನು ಮುಹಮ್ಮದ್ ತನ್ನ ಕಂಪೆನಿಯ ಯಜಮಾನನಿಗೆ ತಿಳಿಸಿದಾಗ, ಅವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದರು. ಅದರಂತೆ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದರು ಎಂದು ಹೆತ್ತವರು ಹೇಳುತ್ತಾರೆ.

ಈ ಹಿಂದೆ 15 ಲಕ್ಷ ಸೌದಿ ರಿಯಾಲ್‌ನಷ್ಟು ಮೊತ್ತವನ್ನು ತಮ್ಮ ಮಗ ಬ್ಯಾಂಕ್‌ಗೆ ಜಮೆ ಮಾಡಿದ್ದಾನೆ. ಹೀಗಿರುವಾಗ ಸಣ್ಣ ಮೊತ್ತವನ್ನು ಆತ ಯಾಕೆ ದರೋಡೆ ಮಾಡುತ್ತಾನೆ ಎಂಬುದಾಗಿ ಹೆತ್ತವರು ಪ್ರಶ್ನಿಸುತ್ತಾರೆ.
ಈ ವಿಷಯದಲ್ಲಿ ಸುಶ್ಮಾ ಸ್ವರಾಜ್ ಮಧ್ಯಪ್ರವೇಶಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News