ಐಸಿಸ್ ಉಗ್ರರನ್ನು ಕೊಂದ ಧೀರ ಪೊಲೀಸ್ ಅಧಿಕಾರಿಗೆ ಶ್ಲಾಘನೆ
ಜಿದ್ದಾ (ಸೌದಿ ಅರೇಬಿಯ), ಜ. 9: ಇಬ್ಬರು ಐಸಿಸ್ ಭಯೋತ್ಪಾದಕರ ಮೇಲೆ ಗುಂಡು ಹಾರಿಸಿ ಕೊಂದ ಸೌದಿ ಅರೇಬಿಯದ ಧೀರ ಪೊಲೀಸ್ ಅಧಿಕಾರಿಯನ್ನು ಇಡೀ ದೇಶ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ ‘ಹೀರೊ’ ಎಂಬುದಾಗಿ ಪ್ರಶಂಸಿಸಿದೆ.
ಅಧಿಕಾರಿಯ ಶೌರ್ಯವನ್ನು ಕೊಂಡಾಡಿರುವ ಬ್ರಿಟನ್‌ನ ‘ಡೇಲಿ ಮೇಲ್’, ‘‘ಭಯೋತ್ಪಾದಕರ ಬಳಿ ಮಶಿನ್‌ಗನ್‌ಗಳಿದ್ದರೂ ಪೊಲೀಸ್ ಅಧಿಕಾರಿಯೊಬ್ಬರು ಅವರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದರು’’ ಎಂದು ಬಣ್ಣಿಸಿದೆ.
‘‘ಸೌದಿ ಅರೇಬಿಯದ ರಾಜಧಾನಿಯಲ್ಲಿ ನಡೆದ ನಾಟಕೀಯ ಕಾಳಗದಲ್ಲಿ ಸ್ಫೋಟಕಗಳ ಬೆಲ್ಟ್ ಧರಿಸಿದ್ದ ಇಬ್ಬರು ಐಸಿಸ್ ಉಗ್ರರನ್ನು ಹೀರೊ ಪೊಲೀಸ್ ಅಧಿಕಾರಿ ಗುಂಡು ಹಾರಿಸಿ ಕೊಂದರು’’ ಎಂದು ಅದು ಹೇಳಿದೆ.
ರಿಯಾದ್‌ನಲ್ಲಿ ಶನಿವಾರ ನಡೆದ ಕಾಳಗದಲ್ಲಿ ವೀರ ಯೋಧ ಕಾರ್ಪೊರಲ್ ಗಿಬ್ರಾನ್ ಜಬ್ಬಾರ್ ಅವಗಿ ಗಾಯಗೊಂಡಿದ್ದಾರೆ. ಆದರೆ, ತಾನು ಗಾಯಗೊಂಡಿರುವುದು ಅವರಿಗೆ ಗೊತ್ತೇ ಆಗಿಲ್ಲ.
ಭಯೋತ್ಪಾದಕರು ಕಲಾಶ್ನಿಕೊವ್ ರೈಫಲ್‌ಗಳು ಮತ್ತು ಸ್ಫೋಟಕ ಬೆಲ್ಟ್‌ನಿಂದ ಸಜ್ಜಾಗಿದ್ದರು. ಪೊಲೀಸ್ ಗಸ್ತು ವಾಹನವೊಂದರಲ್ಲಿ ತಪ್ಪಿಸಿಕೊಳ್ಳುವುದಕ್ಕಾಗಿ ಭಯೋತ್ಪಾದಕರು ಅತ್ತ ಧಾವಿಸಿದಾಗ ವಾಹನದ ಹಿಂಭಾಗದಲ್ಲಿದ್ದ ಅವಗೆ ಭಯೋತ್ಪಾದಕರ ಮೇಲೆ ಗುಂಡು ಹಾರಿಸಿದರು.