ಅಬುದಾಬಿ : ಜಾತ್ಯಾತೀತ ಶಕ್ತಿಗಳ ಐಕ್ಯತೆಗೆ ಇಲ್ಯಾಸ್ ತುಂಬೆ ಕರೆ

Update: 2017-01-09 17:54 GMT

ಅಬುದಾಬಿ, ಜ.9 :ಅನಿವಾಸಿ ಭಾರತೀಯರ ಸಾಮಾಜಿಕ ಸಂಘಟನೆಯಾದ ಅಬುಧಾಬಿ ಕಲ್ಚರಲ್ ಸೊಸೈಟಿಯ ವತಿಯಿಂದ  ವಿದೇಶ ಪ್ರವಾಸದಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಇಲ್ಲಿನ ರುಚಿ ರೆಸ್ಟೋರೆಂಟ್ ಹಾಲ್ ನಲ್ಲಿ   ಆಯೋಜಿಸಲಾಯಿತು .

ಕಾರ್ಯಕ್ರಮದಲ್ಲಿ ಅಬುದಾಬಿಯ ವಿವಿಧ ಸಂಘ ಸಂಸ್ಥೆಗಳ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ನೂರಾರು ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬುದಾಬಿ ಕಲ್ಚರಲ್ ಸೊಸೈಟಿಯ ಅಧ್ಯಕ್ಷರಾದ  ಮುಹಮ್ಮದ್ ಶರೀಫ್ ವಹಿಸಿದ್ದರು.

ಅಭಿನಂದರೆಯನ್ನು ಸ್ವೀಕರಿಸಿ ಮಾತನಾಡಿದ ಇಲ್ಯಾಸ್ ಮುಹಮ್ಮದ್ ತುಂಬೆ  ಭಾರತದ ಪ್ರಸಕ್ತ ಸಾಮಾಜಿಕ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದರು.

ದೇಶದ ಸಂವಿಧಾನಕ್ಕೆ ಮಾರಕವಾದ ಆಶಯಗಳನ್ನೊಳಗೊಂಡ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದು ಜನ ವಿರೋಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ವಿಪಕ್ಷವು ತನ್ನ ಜವಾಬ್ದಾರಿಯನ್ನು ಮರೆತಿದ್ದು, ಜಾತ್ಯಾತೀತ ಪಕ್ಷಗಳು ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಿ ಕೋಮುವಾದಿಗಳ ವಿರುದ್ಧ ಒಂದಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ನಿರ್ಣಾಯಕ ಪಾತ್ರ ವಹಿಸಬೇಕಾದ ದೇಶದ ಮುಸ್ಲಿಮರು ವಿವಿಧ ರಾಜಕೀಯ ಪಕ್ಷಗಳ ಕಬಂಧ ಬಂಧನಗಳಿಂದ ನಲುಗುತ್ತಿದ್ದು, ಮುಸ್ಲಿಮರನ್ನು ಅಸಹಾಯಕರನ್ನಾಗಿಸುವ ಮುಖಾಂತರ ವಿವಿಧ ರಾಜಕೀಯ ಪಕ್ಷಗಳು ಪರಿಸ್ಥಿತಿಯ ಲಾಭವನ್ನೆತ್ತುವ ಪ್ರಯತ್ನವನನ್ನು ಮುಂದುವರಿಸುತ್ತಿದೆ ಎಂದರು.

 ದೇಶದ ಮುಸ್ಲಿಮರು ಮತ್ತು ದಲಿತರು ಬೃಹತ್ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆಯನ್ನು ವಿವರಿಸಿದ ಇಲ್ಯಾಸ್ ತುಂಬೆ, ದಮನಿತ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಆಶಾಕಿರಣವಾದ ಎಸ್‌ ಡಿ ಪಿ ಐ ಪಕ್ಷದ ಕಾರ್ಯವೈಖರಿಗಳ ಕುರಿತು ವಿವರಿಸಿ, ಬುದ್ದಿ ಜೀವಿಗಳು,ಸಾಮಾಜಿಕ ಹೋರಾಟಗಾರರು, ಹಿಂದುಳಿದ ವರ್ಗಗಳ ನಾಯಕರು, ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯದ ಚಿಂತಕರ ಸಮಯ ಪ್ರಜ್ಞೆಯೇ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂದು  ಪಕ್ಷ ಹುಟ್ಟು ಪಡೆದ ಅನಿವಾರ್ಯ ಪರಿಸ್ಥಿತಿಯನ್ನು ವಿವರಿಸಿದರು .

ಸ್ವಹಿತಾಸಕ್ತಿಗೋ ಅಥವಾ ಅಧಿಕಾರಕ್ಕಾಗಿಯೋ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜಕೀಯ ಪ್ರವೇಶ ಮಾಡಿಲ್ಲ . ಬದಲಾಗಿ ತುಳಿತಕ್ಕೊಳಗಾದ ಸಮುದಾಯವು ದಶಕಗಳಿಂದ ಅನುಭವಿಸುತ್ತಿರುವ ತೊಂದರೆಗಳಿಗೆ ಪೂರ್ಣ ವಿರಾಮ ಹಾಕಿ ಅವರನ್ನು ರಾಜಕೀಯ ಶಕ್ತಿಯನ್ನಾಗಿ ಮಾರ್ಪಾಡುಗೊಳಿಸುವ ಉದ್ದೇಶವಿದೆ .  ಪಕ್ಷವು ಅಲ್ಪ ಸಂಖ್ಯಾತರಲ್ಲಿ ವಿಶೇಷವಾಗಿ ಮುಸ್ಲಿಮರಲ್ಲಿ ಮತ್ತು ದಲಿತರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದು, ತಾರತಮ್ಯ ಮತ್ತು ಅಸಹಿಷ್ಣುತೆಯ ವಿರುದ್ಧ ಜಾಗೃತಿಯನ್ನು ಮೂಡಿಸುತ್ತಿದೆ ಎಂದರು.

 ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯೂಎಫ್)  ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಸಿದ್ದೀಕ್ ಉಚ್ಚಿಲ್ ,  ಎಸ್ ಡಿ ಪಿ ಐ ತಮ್ಮ ಗುರಿಯನ್ನು ಸಾಧಿಸಲು ಎಲ್ಲರೂ ಬೆಂಬಲವನ್ನು ನೀಡಬೇಕೆಂದರು.

ದಾರ್ ಅಲ್ ನೂರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ರವೂಫ್ ಮಾತನಾಡಿ,  ದೇಶದಲ್ಲಿ ಬಹಳಷ್ಟು ಬುದ್ಧಿಜೀವಿಗಳು, ಬರಹಗಾರರು ಮತ್ತು ಅಂಕಣಕಾರರಿದ್ದು , ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮೂಖ ಪ್ರೇಕ್ಷಕರಾಗಿದ್ದಾರೆ. ಇಂತಹ ಜನರು ರಾಜಕೀಯ ಹೋರಾಟಕ್ಕೆ ಧುಮುಕಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್ ಡಿ ಪಿ ಐ ಯ ನಡೆಯು ಶ್ಲಾಘನೀಯ ಎಂದರು. 

ರಶೀದ್ ಬಿಜೈ ಸ್ವಾಗತಿಸಿದರು ,ಹಂಝ ಪುತ್ತೂರು ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News