ಮದೀನಾ: 6.44 ಲಕ್ಷ ಕ್ಯಾಪ್ಟಗಾನ್ ಗುಳಿಗೆಗಳ ವಶ

Update: 2017-01-10 14:37 GMT

ಜಿದ್ದಾ, ಜ. 10: ಸೌದಿ ಅರೇಬಿಯದ ಮಾದಕ ದ್ರವ್ಯ ನಿಗ್ರಹ ಪಡೆಗಳು ಸೋಮವಾರ ಮದೀನಾದಲ್ಲಿ 6,23,000 ಕ್ಯಾಪ್ಟಗಾನ್ ಎಂಬ ಉದ್ದೀಪನ ದ್ರವ್ಯ ಗುಳಿಗೆಗಳನ್ನು ವಶಪಡಿಸಿಕೊಂಡಿವೆ.

ಉದ್ದೀಪನ ದ್ರವ್ಯದ ಗುಳಿಗೆಗಳನ್ನು ಹೊತ್ತ ವಾಹನವು ತಬುಕ್‌ನಿಂದ ಜಿದ್ದಾದತ್ತ ಹೋಗುತ್ತಿತ್ತು. ಅದನ್ನು ಮದೀನಾದಲ್ಲಿ ತಡೆಹಿಡಿದು ಸಾಗಣೆದಾರರನ್ನು ಬಂಧಿಸಲಾಯಿತು.

ಈ ನಡುವೆ, ಕಾಸಿಮ್‌ನಲ್ಲಿರುವ ರಾಜಕುಮಾರ ನಯೀಫ್ ಬಿನ್ ಅಬ್ದುಲಝೀಝ್ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು, ಸೌದಿ ಅರೇಬಿಯಕ್ಕೆ 21,000 ಕ್ಯಾಪ್ಟಗಾನ್ ಗುಳಿಗೆಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಗುಳಿಗೆಗಳು ಪ್ರಯಾಣಿಕನ ಸೂಟ್‌ಕೇಸ್‌ನಲ್ಲಿ ಪತ್ತೆಯಾದವು ಎಂದು ವಿಮಾನ ನಿಲ್ದಾಣದ ಸುಂಕ ಮಹಾನಿರ್ದೇಶಕ ವಾಲಿದ್ ಅಲ್-ಫೌಝನ್ ತಿಳಿಸಿದರು.

ಶಾಲಾ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಯಾಪ್ಟಗಾನ್ ಗುಳಿಗೆಗಳಿಗೆ ಬೇಡಿಕೆ ಹೆಚ್ಚುತ್ತಿವೆ. ಈ ಗುಳಿಗೆಗಳು ವಿದ್ಯಾರ್ಥಿಗಳ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ಓದುವುದಕ್ಕಾಗಿ ಎಚ್ಚರವಾಗಿರಲು ಹಾಗೂ ಆ ಮೂಲಕ ಹೆಚ್ಚಿನ ಅಂಕಗಳನ್ನು ಪಡೆಯಲು ನೆರವು ನೀಡುತ್ತವೆ ಎಂಬ ತಪ್ಪು ಪ್ರಚಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಮಾತ್ರೆಗಳಿಗೆ ಮುಗಿಬೀಳುತ್ತಿದ್ದಾರೆ.

ಈಗ ಪೊಲೀಸರು ಇಂಥ ಸುಳ್ಳು ಪ್ರಚಾರ ಮಾಡಿರುವ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News