ಸೌದಿ: ವಿದೇಶಿಯರಿಗೆ ಒಂದೇ ದಿನದಲ್ಲಿ ವ್ಯಾಪಾರ ವೀಸಾ

Update: 2017-01-11 15:09 GMT

ಜಿದ್ದಾ, ಜ. 11: ವಿದೇಶಿ ಹೂಡಿಕೆದಾರರಿಗೆ 24 ಗಂಟೆಗಳಲ್ಲಿ ವ್ಯಾಪಾರ ವೀಸಾಗಳನ್ನು ನೀಡುವ ನೂತನ ವ್ಯವಸ್ಥೆಗೆ ಸೌದಿ ಅರೇಬಿಯ ಚಾಲನೆ ನೀಡಿದೆ.

ವಿದೇಶ ಸಚಿವಾಲಯದ ಅಧಿಕಾರಿಯೊಬ್ಬರು ಈ ವಿಷಯವನ್ನು ಖಚಿತಪಡಿಸಿದ್ದಾರೆ ಎಂದು ‘ಅರಬ್ ನ್ಯೂಸ್’ ವರದಿ ಮಾಡಿದೆ.

ವಿದೇಶಿ ಹೂಡಿಕೆದಾರರು ಒಂದೇ ದಿನದಲ್ಲಿ ಇಲೆಕ್ಟ್ರಾನಿಕ್ ವಿಧಾನದ ಮೂಲಕ ವ್ಯಾಪಾರ ವೀಸಾಗಳನ್ನು ಪಡೆಯಲು ನೂತನ ವ್ಯವಸ್ಥೆಯು ಅವಕಾಶ ನೀಡುತ್ತದೆ.

ಉದ್ಯಮಿಗಳು ಮತ್ತು ವ್ಯಾಪಾರಿ ನಿಯೋಗಗಳಿಗೆ ನೀಡಲಾಗುವ ನೂತನ ಮಾದರಿಯ ವೀಸಾಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 1ರಿಂದಲೇ ಆರಂಭವಾಗಿದೆ.
ಸೌದಿ ಅರೇಬಿಯದಲ್ಲಿರುವ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಲು ಅಗತ್ಯವಾದ ಸಂದರ್ಶನ ವೀಸಾಗಳಿಗಾಗಿ ಅರ್ಜಿ ಹಾಕುವ ಪ್ರಕ್ರಿಯೆ ಮುಂದಿನ ಕೆಲವೇ ದಿನಗಳಲ್ಲಿ ಆರಂಭಗೊಳ್ಳುವುದು.

ಆರ್ಥಿಕ ಮತ್ತು ಅಭಿವೃದ್ಧಿ ವ್ಯವಹಾರಗಳ ಮಂಡಳಿ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸೌದಿ ಅರೇಬಿಯದಲ್ಲಿ ವ್ಯಾಪಾರ ವಾತಾವರಣವನ್ನು ಉತ್ತಮ ಪಡಿಸುವ ಉದ್ದೇಶದಿಂದ ಅದು ಈ ಕ್ರಮಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News