×
Ad

ತೈಲ ಉತ್ಪಾದನೆಯಲ್ಲಿ ಭಾರೀ ಕಡಿತ ಮಾಡಿದ ಸೌದಿ ಅರೇಬಿಯ

Update: 2017-01-13 20:58 IST

ಅಬುಧಾಬಿ, ಜ. 13: ಸೌದಿ ಅರೇಬಿಯ ತನ್ನ ತೈಲ ಉತ್ಪಾದನೆಯನ್ನು ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಗ್ಗಿಸಿದೆ ಎಂದು ಇಂಧನ ಸಚಿವ ಖಾಲಿದ್ ಅಲ್-ಫಲಿಹ್ ಗುರುವಾರ ಹೇಳಿದ್ದಾರೆ.

ಜಾಗತಿಕ ತೈಲ ಬೆಲೆ ಕುಸಿತವನ್ನು ನಿಲ್ಲಿಸಿ ಬೆಲೆ ಏರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ‘ಒಪೆಕ್’ ದೇಶಗಳ ಒಕ್ಕೂಟದ ಅಭಿಯಾನದ ನೇತೃತ್ವವನ್ನು ಜಗತ್ತಿನ ಅತ್ಯಂತ ದೊಡ್ಡ ತೈಲ ರಫ್ತುದಾರ ವಹಿಸಿಕೊಂಡಿದೆ.

 ತೈಲ ಉತ್ಪಾದನೆ ದಿನಕ್ಕೆ 1 ಕೋಟಿ ಬ್ಯಾರಲ್‌ಗಿಂತಲೂ ಕೆಳಗೆ ಇಳಿದಿದೆ ಎಂದುದ ಅಲ್-ಫಲಿಹ್ ತಿಳಿಸಿದರು. ಇದು ಒಪೆಕ್ ಮತ್ತು ನಾನ್-ಒಪೆಕ್ ತೈಲ ಉತ್ಪಾದಕರ ನಡುವಿನ ಒಪ್ಪಂದದ ಭಾಗವಾಗಿ ಸೌದಿ ಅರೇಬಿಯ ಘೋಷಿಸಿರುವ ಕಡಿತಕ್ಕಿಂತಲೂ ಹೆಚ್ಚಾಗಿದೆ.

ಅಬುಧಾಬಿಯ ಅಟ್ಲಾಂಟಿಕ್ ಕೌನ್ಸಿಲ್ ಗ್ಲೋಬಲ್ ಎನರ್ಜಿ ಫೋರಂನಲ್ಲಿ ಮಾತನಾಡಿದ ಸೌದಿ ಇಂಧನ ಸಚಿವರು, ಪ್ರಸಕ್ತ ಉತ್ಪಾದನೆ ಕಡಿತವು ದಿನಕ್ಕೆ ಒಂದು ಕೋಟಿ ಬ್ಯಾರಲ್‌ಗಿಂತ ಹೆಚ್ಚೇನೂ ಕಡಿಮೆಯಿಲ್ಲ ಎಂದು ಹೇಳಿದರು. ಫೆಬ್ರವರಿಯಲ್ಲಿ ಇನ್ನಷ್ಟು ಉತ್ಪಾದನೆ ಕಡಿತ ಮಾಡುವ ಸೌದಿ ಅರೇಬಿಯದ ಯೋಜನೆಯನ್ನೂ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.

ಅಂದರೆ, ಈಗ ಸೌದಿ ಅರೇಬಿಯ ದಿನಕ್ಕೆ 4.86 ಲಕ್ಷ ಬ್ಯಾರಲ್‌ಗಿಂತಲೂ ಹೆಚ್ಚು ತೈಲದ ಉತ್ಪಾದನೆಯನ್ನು ಕಡಿತಗೊಳಿಸಿದೆ.

ಇನ್ನು ಎರಡು-ಮೂರು ವರ್ಷಗಳಲ್ಲಿ ತೈಲ ಮಾರುಕಟ್ಟೆ ದೃಢಗೊಳ್ಳುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

‘‘ಹಲವು ಸಮಯದಿಂದ ಮಾರುಕಟ್ಟೆಯನ್ನು ಮರು ಸರಿದೂಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೆವು’’ ಎಂದರು.

‘‘ಒಪೆಕ್ ಮತ್ತು ಒಪೆಕ್ ಹೊರತಾದ ತೈಲ ಉತ್ಪಾದಕರ ನಡುವೆ ಇತ್ತೀಚೆಗೆ ನಡೆದ ಉತ್ಪಾದನೆ ಒಪ್ಪಂದಗಳಿಂದ ಮಾರುಕಟ್ಟೆಯನ್ನು ಮರು ಸರಿದೂಗಿಸುವ ಕೆಲಸ ವೇಗ ಪಡೆದುಕೊಂಡಿದೆ. ಈ ಒಪ್ಪಂದಗಳು ಜಾಗತಿಕ ಮಾರುಕಟ್ಟೆಗಳಿಗೆ ಸ್ಥಿರತೆ ತರುತ್ತವೆ ಎಂಬ ವಿಶ್ವಾಸ ನನಗಿದೆ’’ ಎಂದರು.

ಈ ವರ್ಷ ತೈಲ ಬೇಡಿಕೆ ದಿನಕ್ಕೆ 10 ಲಕ್ಷ ಬ್ಯಾರಲ್‌ಗಿಂತಲೂ ಹೆಚ್ಚಿನಷ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News