ದುಬೈ : ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಹೋಟೆಲ್ ನಲ್ಲಿ ಉಚಿತ ಊಟ ನೀಡುತ್ತಿದ್ದಾರೆ ವಿವೇಕ್- ಸಂಜಯ್

Update: 2017-01-18 09:44 GMT

ದುಬೈ,ಜ.19 : ಈ ದುಬಾರಿ ಯುಗದಲ್ಲಿ ಯಾವ ಹೊಟೇಲಾದರೂ ಉಚಿತ ಊಟ ನೀಡುವುದುಂಟೇ ? ಇಲ್ಲ ಎಂದು ಹೆಚ್ಚಿನವರು ಹೇಳಬಹುದು. ಆದರೆ ದುಬೈಯಲ್ಲಿ ಇಂತಹ ಒಂದು ಸಣ್ಣ ಹೋಟೆಲಿದೆ. ಇಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಊಟ ಒದಗಿಸುತ್ತಿದ್ದಾರೆ ಈ ಹೊಟೇಲಿನ ಮಾಲಕರಾದ ವಿವೇಕ್ ಬಲನೆಹಾಗೂ ಸಂಜಯ್ ಮೋಹನ್.

ಇಲ್ಲಿ ಉದ್ಯೋಗ ಅರಸಿ ಬಂದವರು ಉದ್ಯೋಗ ಸಿಗದೆ ಊಟಕ್ಕೂ ಹಣವಿಲ್ಲದವರು ಕರಾಮ ಹಾಗೂ ಬಲ್ ಬರ್ಷದಲ್ಲಿರುವ ನೊಮ್ ನೊಮ್ ಏಷ್ಯ ರೆಸ್ಟಾರೆಂಟಿನಲ್ಲಿಉಚಿತವಾಗಿ ಊಟ ಮಾಡಬಹುದು. ಅವರು ಪಲ್ಯ ಮತ್ತು ನೂಡಲ್ಸ್ ಇಲ್ಲವೇ ಅನ್ನ ಆಯ್ದುಕೊಳ್ಳಬಹುದು.

ಊಟ ಸಂಪೂರ್ಣವಾಗಿ ಉಚಿತವಾದರೂ, ಉಚಿತ ಊಟ ಮಾಡಲು ಮುಜುಗರಪಡುವವರು ಮುಂದೆ ತಮಗೆ ಉದ್ಯೋಗ ದೊರೆತಾಗ ಊಟದ ಹಣವನ್ನು ರೆಸ್ಟಾರೆಂಟಿಗೆನೀಡಬಹುದು. ನಿಜ ಹೇಳಬೇಕೆಂದರೆ ಯಾವೊಂದು ಪ್ರಚಾರವನ್ನೂ ನಿರೀಕ್ಷಿಸದೆ ವಿವೇಕ್ ಹಾಗೂ ಸಂಜಯ್ ಈ ಮಾನವೀಯ ಕಾರ್ಯವನ್ನು ಕೈಗೊಂಡಿದ್ದಾರೆ.

ಈ ರೆಸ್ಟಾರೆಂಟಿನ ಸೂಚನಾ ಫಲಕವನ್ನು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ದುಬೈ ಮೂಲದ ಆಹಾರ ಕನ್ಸಲ್ಟೆಂಟ್ ಶೇರ್ ಮಾಡಿದಾಗಲೇ ಉಚಿತ ಆಹಾರ ನೀಡುವ ಇಂತಹ ಒಂದು ರೆಸ್ಟಾರೆಂಟ್ ಕೂಡ ದುಬೈಯಲ್ಲಿದೆ ಎಂದು ಹೆಚ್ಚಿನವರಿಗೆ ತಿಳಿದು ಬಂದಿತ್ತು. ಈ ಉಚಿತ ಊಟ ಯೋಚನೆ ಮೊದಲು ಹೊಳೆದಿದ್ದು ವಿವೇಕ್ ಗೆ ಎಂದು ಅವರ ಪಾಲುದಾರ ಸಂಜಯ್ ಅಭಿಮಾನದಿಂದ ಹೇಳುತ್ತಾರೆ. ‘‘ನಾವು ಈ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡುತ್ತಿದ್ದೇವೆ. ಜನರಲ್ಲಿ ಪ್ರಚಾರ ಕೈಗೊಂಡು ಅದರ ಪ್ರಯೋಜನ ಪಡೆಯುವುದು ನಮ್ಮ ಉದ್ದೇಶವಲ್ಲ’’ ಎಂದು ಹೇಳುವ ಮೋಹನ್,ಇತರರಿಗೆ ಸಹಾಯ ಮಾಡುವುದರಲ್ಲೂ ಒಂದು ಧನ್ಯತಾ ಭಾವವಿರುತ್ತದೆ ಎಂದರು.

‘‘ಇಲ್ಲಿಗೆ ಉದ್ಯೋಗ ಅರಸಿಕೊಂಡು ಬರುವವರಿಗೆ ಸಹಾಯ ದೊರೆಯುವುದು ಬಹಳ ವಿರಳ. ಅಂಗವಿಕಲರಿಗೆ ಇಲ್ಲಿನ ಜನ ಸಹಾಯ ಮಾಡುವರಾದರೂ ನಿರುದ್ಯೋಗಿಗಳಿಗೆ ಸಹಾಯಹಸ್ತ ಚಾಚುವುದಿಲ್ಲ. ನನಗೆ ಇಲ್ಲಿ ಉದ್ಯೋಗ ಕೇಂದ್ರವೊಂದನ್ನು ತೆರೆಯಲು ಸಾಧ್ಯವಿಲ್ಲ. ಆದರೆ ಕನಿಷ್ಠ ಉದ್ಯೋಗವಿಲ್ಲದವರಿಗೆ ಆಹಾರವಾದರೂ ಒದಗಿಸಬಹುದೆನ್ನುವ ಸಮಾಧಾನವಿದೆ,’’ ಎನ್ನುತ್ತಾರೆ ಮೋಹನ್.

ಇಲ್ಲಿಯವರೆಗೆ ಸುಮಾರು 100 ಮಂದಿ ಈ ಉಚಿತ ಊಟದ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಉಚಿತ ಊಟ ಮಾಡಿದವರಿಗೆ ಮುಂದೆ ಉದ್ಯೋಗ ದೊರಕಿದಾಗ ಅವರು ಆ ಸಿಹಿ ಸುದ್ದಿಯನ್ನು ನಮ್ಮೊಂದಿಗೆ ಹಂಚಲು ಬರುತ್ತಾರೆ, ಎಂದು ಕರಾಮ ಶಾಖೆಯ ಮ್ಯಾನೇಜರ್ ವಿಜಯ್ ಕುಮಾರ್ ಹೇಳುತ್ತಾರೆ. ‘‘ಅವರು ಉಚಿತ ಊಟ ಮಾಡಿದ ನಂತರ ಸಂತಸ ಪಡುತ್ತಾರೆ ಹಾಗೂನಮ್ಮನ್ನು ಹರಸುತ್ತಾರೆ. ಮುಂದೊಂದು ದಿನ ಅವರು ತಮಗೆ ಉದ್ಯೋಗ ದೊರಕಿತೆಂದು ಹೇಳಲು ನಮ್ಮ ಬಳಿ ಬಂದಾಗಅತೀವ ಸಂತಸವಾಗುತ್ತದೆ,’’ ಎನ್ನುತ್ತಾರೆ ಅವರು.

ಎಷ್ಟು ಸಮಯದ ತನಕ ಈ ಉಚಿತ ಊಟ ಯೋಜನೆ ಮುಂದುವರಿಯುವುದೆಂದು ಕೇಳಿದಾಗ ಈ ರೆಸ್ಟಾರೆಂಟಿನ ಪಾಲುದಾರರುತಮಗೆ ಸಾಧ್ಯವಾದಷ್ಟು ಸಮಯ ಇದನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News