ಕುವೈಟ್: ಭಾರತದ 2 ಗಾರ್ಡ್‌ಗಳನ್ನು ಕೊಂದು ಹಣದೋಚಿದ ಆರೋಪಿಗೆ ಗಲ್ಲುಶಿಕ್ಷೆ ಖಾಯಂ

Update: 2017-01-21 06:55 GMT

ಕುವೈಟ್ ಸಿಟಿ,ಜ.21: ಕುವೈಟ್‌ನಲ್ಲಿ ಸೆಕ್ಯೂರಿಟಿ ಉದ್ಯೋಗಿಗಳಾಗಿದ್ದ ಇಬ್ಬರು ಭಾರತೀಯರನ್ನ್ನು ಕೊಂದು ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳಿಗೆ ಕೆಳಕೋರ್ಟು ವಿಧಿಸಿದ ಗಲ್ಲುಶಿಕ್ಷೆಯನ್ನು ಕುವೈಟ್ ಸುಪ್ರೀಂಕೋರ್ಟು ಖಾಯಂಗೊಳಿಸಿದೆ. ಈ ಹಿಂದೆ ಕ್ರಿಮಿನಲ್ ಕೋರ್ಟು ಒಂದನೆ ಆರೋಪಿ ಯೂಸುಫ್ ಸುಲೈಮಾನ್ ಉಬೈದ್ ಅಲಿ(21)ಯಾನೆ ಬಿದೂನಿ ಎಂಬಾತನಿಗೆ ಗಲ್ಲು ಹಾಗೂ ಎರಡನೆ ಆರೋಪಿ ಅಬ್ದುಲ್ಲ ಸಅದ್ ಅಲ್ ಇನ್ಸಿಗೆ 10 ವರ್ಷ ಜೈಲುಶಿಕ್ಷೆಯನ್ನು ನೀಡಿ ತೀರ್ಪಿತ್ತಿತ್ತು. ಸುಪ್ರೀಂಕೋರ್ಟು ಇದನ್ನು ಈಗ ಖಾಯಂಗೊಳಿಸಿ ತೀರ್ಪು ನೀಡಿದೆ. ಪ್ರಕರಣದ ಮೂರನೆ ಆರೋಪಿ ಸಿರಿಯನ್ ವ್ಯಕ್ತಿ ಹಾಗೂ ನಾಲ್ಕನೆ ಆರೋಪಿ ಸ್ವದೇಶಿಪ್ರಜೆಗೆ 500 ದೀನಾರ್ ದಂಡ ವಿಧಿಸಿದೆ. 

ಪ್ರಥಮ ಮತ್ತು ದ್ವಿತೀಯ ಆರೋಪಿಗಳಿಗೆ ಆಯುಧ ಅಡಗಿಸಿಡಲು ನೆರವಾದ ಆರೋಪದಡಿಯಲ್ಲಿ ಮೂರನೆ ಮತ್ತು ನಾಲ್ಕನೆ ಆರೋಪಿಗಳನ್ನು ಕೋರ್ಟು ಶಿಕ್ಷಿಸಿದೆ ಎಂದು ವರದಿಯಾಗಿದೆ. 2014 ಎಪ್ರಿಲ್‌ನಲ್ಲಿ ಕೇರಳ ಮೂಲದ ಇಬ್ಬರು ಭಾರತೀಯ ಸೆಕ್ಯೂರಿಟಿಗಾರ್ಡ್‌ಗಳು ದರೋಡೆಕೋರರಿಬ್ಬರ ದಾಳಿಗೆ ತುತ್ತಾಗಿದ್ದರು.

ಬದರ್ ಅಲ್ ಮುಲ್ಲ ಸೆಕ್ಯುರಿಟಿ ಕಂಪೆನಿಯಲ್ಲಿ ಗಾರ್ಡ್ ಉದ್ಯೋಗದಲ್ಲಿದ್ದ ಕಲ್ಲಿಕೋಟೆಯ ಶಾರಂಗ್‌ಧರನ್, ಮಲಪ್ಪುರಂನ ರಾಷಿದ್ ಜಮಾಲುಲ್ಲೈಲಿ ತಂಙಳ್‌ರನ್ನು ದರೋಡೆಕೋರರು ಕೊಂದು ಹಣ ದೋಚಿದ್ದರು. ಸುಲೈಬಿಯದ ಸೂಪರ್ ಮಾರ್ಕೆಟ್‌ನಿಂದ ಹಣ ಸಂಗ್ರಹಿಸಿ ಹೊರಬರುತ್ತಿದ್ದ ಇವರಿಬ್ಬರನ್ನು ತಡೆದು ನಿಲ್ಲಿಸಿ ದರೋಡೆಕೋರರು ದಾಳಿ ನಡೆಸಿದ್ದರು. ದಾಳಿಗೊಳಗಾಗಿದ್ದ ಶಾಂಗ್‌ಧರನ್ ಘಟನಾಸ್ಥಳದಲ್ಲಿ ಮತ್ತು ರಾಷಿದ್ ತಂಙಳ್ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರಿಬ್ಬರ ಕೈಯಲ್ಲಿದ್ದ 13,000 ದೀನಾರ್‌ನ್ನು ದೋಚಿ ಪರಾರಿಯಾಗಿದ್ದ ದರೋಡೆಕೋರರನ್ನು ಪೊಲೀಸರು ಎರಡು ದಿವಸಗಳಲ್ಲೇ ಬಂಧಿಸಿದ್ದರು  ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News