ದೋಹಾ: 40 ವರ್ಷಗಳಿಂದ ಉಚಿತ ಮಜ್ಜಿಗೆ ಸೇವೆ

Update: 2017-01-21 12:11 GMT

ದೋಹಾ, ಜ. 21: ಕತರ್ ರಾಜಧಾನಿ ದೋಹಾದಲ್ಲಿ ವ್ಯಕ್ತಿಯೊಬ್ಬರು 40 ವರ್ಷಗಳಿಗೂ ಅಧಿಕ ಅವಧಿಯಿಂದ ಜನರಿಗೆ ಮಜ್ಜಿಗೆಯನ್ನು ಉಚಿತವಾಗಿ ನೀಡುತ್ತಿದ್ದಾರೆ.ಇಲ್ಲಿನ ‘ರ್ಯಾಡಿಸನ್ ಬ್ಲೂ ಹೊಟೇಲ್’ನ ಎದುರು ಭಾಗದಲ್ಲಿರುವ ಶೇಖ್ ಘಾನಮ್ ಬಿನ್ ಅಲಿ ಅಲ್ ಥಾನಿ ಅವರ ಮನೆಯಲ್ಲಿ ತಾಜಾ ಮಜ್ಜಿಗೆ ಮತ್ತು ತಂಪು ನೀರನ್ನು ಕೊಡುವ ನಳ್ಳಿಯನ್ನು ಅಳವಡಿಸಲಾಗಿದೆ.

ಮಜ್ಜಿಗೆ ಕೊಡುವ ನಳ್ಳಿಯು ಬೆಳಗ್ಗೆ 7.30ರಿಂದ ಅಪರಾಹ್ನ 3 ಗಂಟೆಯವರೆಗೆ ಕೆಲಸ ಮಾಡುತ್ತದೆ.ಮಜ್ಜಿಗೆ ತಯಾರಿಸುವುದಕ್ಕಾಗಿ ಪ್ರತಿ ದಿನ ಸುಮಾರು 2,000 ಲೀಟರ್ ಹಾಲನ್ನು ಅವರ ಮನೆಗೆ ತರಲಾಗುತ್ತದೆ. ಬಳಿಕ ಮಜ್ಜಿಗೆಯ ಟ್ಯಾಂಕ್‌ಗೆ ಮಜ್ಜಿಗೆಯನ್ನು ತುಂಬಿಸಲಾಗುತ್ತದೆ.

ದೋಹಾದ ಹೊರವಲಯದಲ್ಲಿ ಆಕಳು ಸಾಕಣೆ ಕೇಂದ್ರವನ್ನು ಹೊಂದಿರುವ ಶೇಖ್ ಘಾನಮ್, ಅಲ್‌ಮಾಹ ಎಂಬ ಡೇರಿಯನ್ನೂ ಹೊಂದಿದ್ದಾರೆ. ಅವರು ಪವಿತ್ರ ರಮಝಾನ್ ತಿಂಗಳಲ್ಲಿ ಸಾರ್ವಜನಿಕರಿಗೆ ಬೆಣ್ಣೆ ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಉಚಿತವಾಗಿ ವಿತರಿಸುತ್ತಾರೆ.

ರಮಝಾನ್ ಅವಧಿಯಲ್ಲಿ ಅವರು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಮಿಕ ಶಿಬಿರಗಳಲ್ಲಿ ಮಜ್ಜಿಗೆಯನ್ನು ವಿತರಿಸುತ್ತಾರೆ ಹಾಗೂ ಕಡಿಮೆ ಆದಾಯದ ವಿದೇಶೀಯರಿಗಾಗಿ ಇಫ್ತಾರ್ ಕೂಟಗಳನ್ನು ನಡೆಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News