ಜಿದ್ದಾ: ಇಬ್ಬರು ಶಂಕಿತ ಉಗ್ರರ ಹತ್ಯೆ, ಇಬ್ಬರ ಬಂಧನ

Update: 2017-01-21 18:34 GMT

ಜಿದ್ದಾ, ಜ.21: ಜಿದ್ದಾದ ಆಗ್ನೇಯ ಭಾಗದಲ್ಲಿರುವ ಅಲ್- ಹಝರತ್ ಜಿಲ್ಲೆಯಲ್ಲಿ ಇಬ್ಬರು ಅಪಾಯಕಾರಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದು, ಇನ್ನಿಬ್ಬರನ್ನು ಸೆರೆ ಹಿಡಿಯಲಾಗಿದೆ.

  ಆಲ್-ಹಝರತ್ ಜಿಲ್ಲೆಯ ಮನೆಯೊಂದರಲ್ಲಿ ಭಯೋತ್ಪಾಕರ ತಂಡವೊಂದು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಈ ಮನೆಯಲ್ಲಿದ್ದವರಿಗೆ ನಸೀಮ್ ಜಿಲ್ಲೆಯಲ್ಲಿರುವ ಮತ್ತೋರ್ವ ಭಯೋತ್ಪಾಕನೊಂದಿಗೆ ನಂಟಿರುವ ಕುರಿತು ತಿಳಿದು ಬಂದಿತು. ಈತ ಆಗಾಗ ತನ್ನ ಪತ್ನಿಯೊಂದಿಗೆ ಈ ಮನೆಗೆ ಭೇಟಿ ನೀಡುತ್ತಿದ್ದ ವಿಷಯ ತಿಳಿಯಿತು.

  ಈ ವ್ಯಕ್ತಿ ಈ ಹಿಂದೆ ಭಯೋತ್ಪಾದಕ ಕೃತ್ಯಕ್ಕಾಗಿ 8 ವರ್ಷಗಳ ಜೈಲುವಾಸ ಅನುಭವಿಸಿದ್ದು 2 ವರ್ಷಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಈತನ ನೆರವಿನಿಂದ ಆಲ್-ಹಝರತ್‌ನಲ್ಲಿ ಮನೆಯನ್ನು ಬಾಡಿಗೆಗೆ ಪಡೆಯಲಾಗಿದ್ದು, ಮನೆಯ ಮಾಲಕರ ಮತ್ತು ಪರಿಸರದ ವ್ಯಕ್ತಿಗಳಿಗೆ ಸಂಶಯ ಬಾರದಿರಲು ತನ್ನ ಪತ್ನಿಯನ್ನು ಆಗಿಂದಾಗ್ಗೆ ಈ ಮನೆಗೆ ಕರೆತರುತ್ತಿದ್ದ ಎಂದು ತಿಳಿದು ಬಂದಿದೆ.

 ಎರಡೂ ಮನೆಗಳನ್ನು ಸುತ್ತುವರಿದ ಭದ್ರತಾ ಪಡೆಗಳು ನಸೀಮ ಜಿಲ್ಲೆಯ ಮನೆಯಿಂದ ಓರ್ವ ಸೌದಿ ಪ್ರಜೆ ಮತ್ತಾತನ ಪಾಕ್ ಮೂಲದ ಪತ್ನಿಯನ್ನು ಬಂಧಿಸಿದ್ದಾರೆ. ಮನೆಯಲ್ಲಿ ತಪಾಸಣೆ ನಡೆಸಿದಾಗ ಸೊಂಟಕ್ಕೆ ಕಟ್ಟಿಕೊಳ್ಳುವ ಬಾಂಬ್ ಬೆಲ್ಟ್, ಸ್ಥಳೀಯವಾಗಿ ತಯಾರಿಸಲಾದ ಬಾಂಬ್, ಮೆಷಿನ್‌ಗನ್ ವಶಕ್ಕೆ ಪಡೆದಿದ್ದಾರೆ.

ಆಲ್ ಹಝರತ್ ಜಿಲ್ಲೆಯ ಮನೆಯಲ್ಲಿರುವವರು ಪೊಲೀಸರಿಗೆ ಶರಣಾಗಲು ನಿರಾಕರಿಸಿದಾಗ ಅವರನ್ನು ಶೂಟೌಟ್ ಮಾಡಿ ಹತ್ಯೆ ಮಾಡಲಾಗಿದೆ. ಈ ವೇಳೆ ಭಯೋತ್ಪಾದಕರು ಸ್ಫೋಟಕ ವಸ್ತುಗಳನ್ನು ಸಿಕ್ಕಿಸಿದ್ದ ಬೆಲ್ಟ್ ಅನ್ನು ಸ್ಫೋಟಿಸಿದ್ದು ಮನೆಗೆ ಭಾರೀ ಹಾನಿಯಾಗಿದೆ. ಈ ಮನೆಯನ್ನು ಬಾಂಬ್ ತಯಾರಿಸುವ ಪ್ರಯೋಗಶಾಲೆಯಾಗಿ ಭಯೋತ್ಪಾದಕರು ಬಳಸುತ್ತಿದ್ದರು ಎಂದು ಭದ್ರತಾ ದಳದ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News