ಸಮಸ್ಯೆಯಿದ್ದರೆ ಮನೆ ಕೆಲಸದವರು ರಾಯಭಾರಿ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು

Update: 2017-01-23 12:02 GMT

ರಿಯಾದ್, ಜ.23: ಸೌದಿ ಅರೇಬಿಯದಲ್ಲಿ ಮನೆಕೆಲಸಕ್ಕಾಗಿ ಬಂದವರು ಸಮಸ್ಯೆ ಎದುರಿಸುತ್ತಿದ್ದರೆ ನೇರವಾಗಿ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಕೆಲಸ ವೀಸಾದಲ್ಲಿ ಬರುವವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಟ್ವಿಟರ್ ಮೂಲಕ ರಾಯಭಾರ ಕಚೇರಿ ನಡೆಸುತ್ತಿರುವ ಅಭಿಯಾನದ ಪ್ರಯುಕ್ತ ಈ ಮಾಹಿತಿ ನೀಡಲಾಗಿದೆ.

ಕೆಲಸದಲ್ಲಿ ಸಮಸ್ಯೆ ಅನುಭವಿಸುತ್ತಿರುವವರು ಅದನ್ನು ತಿಳಿಸಬೇಕು. ಸಮಸ್ಯೆ ಪರಿಹಾರಕ್ಕೆ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು. ರಾಯಭಾರಿ ಕಚೇರಿಯ ವೆಲ್ಫೇರ್ ಅಧಿಕಾರಿಯನ್ನು ಭೇಟಿಯಾಗಬೇಕು. ಇದರ ಹೊರತು ಸ್ಪೋನ್ಸರ್‌ಗಳ ಮನೆಗೆ ಹೋಗಿ ಸಮಸ್ಯೆ ಏನೆಂದು ವಿಚಾರಿಸಿನೋಡಲು ಈಗ ಸೌದಿಯಲ್ಲಿರುವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ ಎಂದು ಟ್ವಿಟರ್‌ನಲ್ಲಿ ಹೇಳಲಾಗಿದೆ.

ಮನೆಕೆಲಸದವರನ್ನು ರಿಕ್ರ್ಯೂಟ್ ನಡೆಯುವಾಗ ಎರಡೂ ದೇಶಗಳ ಒಪ್ಪಂದವನ್ನು ಪಾಲಿಸಿಯೇ ಸೌದಿಗೆ ಕೆಲಸಗಾರರು ಬಂದಿದ್ದರೆ ಅಂತಹವರಿಗೆ ಯಾವುದೆ ಸಮಸ್ಯೆಯಾಗದು. ಅವರಿಗೆ ಕಾನೂನಿನ ರಕ್ಷಣೆ ಸಿಗುತ್ತದೆ. ಮೂವತ್ತು ವರ್ಷ ಆಗದೆ ಮತ್ತು 50 ವರ್ಷ ಮೀರಿದವರನ್ನು ರಿಕ್ರ್ಯೂಟ್ ಮಾಡದಂತೆ ತಡೆಯಲಾಗುತ್ತದೆ.

ರಾಯಭಾರ ಕಚೇರಿ ಅನುಮತಿ ರಹಿತವಾಗಿ ನೇಮಕಾತಿ ಸಾಧ್ಯವಿಲ್ಲ. ಸೇವೆ ಮತ್ತು ವೇತನ ಒಪ್ಪಂದ ಇರಬೇಕು. ವೀಸಾ, ಕೆಲಸದ ಮಾಲಕ ಮತ್ತು ಕೆಲಸಗಾರರ ವಿವರಗಳನ್ನು ವಿವರವಾಗಿ ಪರಿಶೀಲಿಸಿ ವಾಸ್ತವಿಕ ಸ್ಥಿತಿಯನ್ನು ಅರಿತ ಬಳಿಕವೇ ಒಪ್ಪಂದಕ್ಕೆ ರಾಯಭಾರ ಕಚೇರಿ ಅಂತಿಮ ಮುದ್ರೆ ಒತ್ತದೆ. ಜೊತೆಗೆ 2500ಡಾಲರ್‌ನ ಬ್ಯಾಂಕ್ ಗ್ಯಾರಂಟಿಯನ್ನು ಕೆಲಸದ ಮಾಲಕನಿಂದ ರಾಯಭಾರ ಕಚೇರಿ ಪಡೆಯುತ್ತದೆ.

ಕೆಲಸದ ಮಾಲಕನಿಂದ ಏನಾದರೂ ತೊಂದರೆ ಸಂಭವಿಸಿದರೆ ಸಮಸ್ಯೆಪರಿಹಾರಕ್ಕೆ ಈ ಗ್ಯಾರಂಟಿ ಮೊತ್ತವನ್ನು ವಿನಿಯೋಗಿಸಲಾಗುವುದು. ಸೌದಿ ಅರೇಬಿಯದಲ್ಲಿ ಮನೆಕೆಲಸದವರನ್ನು ರಿಕ್ರ್ಯೂಟ್ ಮಾಡಲು ಆರು ಏಜೆನ್ಸಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸೌದಿಯಲ್ಲಿರುವ ಭಾರತ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News