ದಮಾಮ್: ನಮ್ಮ ಪ್ರವಾದಿ-ಸಾರ್ವಜನಿಕ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮ
ದಮಾಮ್, ಜ.25: ಇಂಡಿಯಾ ಫ್ರೆಟರ್ನಿಟಿ ಫೋರಮ್, ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಘಟಕದ ವತಿಯಿಂದ ''ನಮ್ಮ ಪ್ರವಾದಿ (ಸ.ಅ.)'' ಸಾರ್ವಜನಿಕ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮವು ಇತ್ತೀಚೆಗೆ ಸೌದಿಅರೇಬಿಯದ ಆಲ್‌ಖೊಬರ್ನ ಗಲ್ಫ್ ದರ್ಬಾರ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಘಟಕದ ಸದಸ್ಯ ಮುಹಮ್ಮದ್ ಅಝರುದ್ದೀನ್ ಮಾತನಾಡಿ, ಒಂದು ಅತ್ಯುತ್ತಮ ಸಮುದಾಯ ನಿರ್ಮಾಣಕ್ಕಾಗಿ ಪ್ರವಾದಿ ಮುಹಮ್ಮದ್ (ಸ.ಅ.) ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಮಾತ್ರವಲ್ಲದೆ, ತನ್ನ ಜೊತೆಗಿರುವ ಸಂಗಾತಿಗಳನ್ನೂ ತರಬೇತುಗೊಳಿಸಿದರು. ಒಳಿತಿನ ಆದೇಶ ನೀಡುವುದರೊಂದಿಗೆ ಕೆಡುಕನ್ನು ತಡೆಯುವ ಕಾರ್ಯವನ್ನು ಪ್ರವಾದಿ ಮುಹಮ್ಮದ್ (ಸ.ಅ.) ನಿರ್ವಹಿಸಿದರು. ಅವರನ್ನು ಅನುಸರಿಸುವವರು ಕೂಡಾ ಇದೇ ರೀತಿಯ ಗುಣಸ್ವಭಾವವನ್ನು ಹೊಂದಿರುತ್ತಾರೆ ಎಂದು ಪವಿತ್ರ ಕುರ್ ಆನ್ ನಮಗೆ ಸೂಚ್ಯವಾಗಿ ತಿಳಿಸುತ್ತಿದೆ. ಇದರರ್ಥ ಪ್ರವಾದಿವರ್ಯರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ಅವರ ನೈಜ ಅನುಯಾಯಿ ಆಗಲು ಸಾಧ್ಯ ಎಂದು ಅಝರುದ್ದೀನ್ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಘಟಕದ ಕಾರ್ಯದರ್ಶಿ ಮುಹಮ್ಮದ್ ಅಥಾವುಲ್ಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಇಸಾಖ್, ಜಮೀಯ್ಯತುಲ್ ಫಲಾಹ್ ಉಪಾಧ್ಯಕ್ಷ ನಿಝಾಮುದ್ದೀನ್ ಶೇಖ್ ಉಪಸ್ಥಿತರಿದ್ದರು.
ಮುಹಮ್ಮದ್ ಬಶೀರ್ ಕಿರಾಅತ್ ಪಠಿಸಿದರು. ಮುಹಮ್ಮದ್ ನಿಸಾಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಹಮ್ಮದ್ ಅಸ್ಗರ್ ಧನ್ಯವಾದ ಸಲ್ಲಿಸಿದರು. ಮುಹಮ್ಮದ್ ಸುನೈಫ್ ಕಾರ್ಯಕ್ರಮ ನಿರೂಪಿಸಿದರು.