ಕುವೈತ್: ಕೊಲೆ ಅಪರಾಧಿ ರಾಜಕುಮಾರನಿಗೆ ಗಲ್ಲು ಜಾರಿ

Update: 2017-01-25 11:36 GMT

ಕುವೈತ್ ಸಿಟಿ, ಜ. 25: ರಾಜ ಕುಟುಂಬದ ಓರ್ವ ಸದಸ್ಯ ಹಾಗೂ ಮೂವರು ಮಹಿಳೆಯರು ಸೇರಿದಂತೆ ಪೂರ್ವಯೋಜಿತ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳೆಂದು ಸಾಬೀತಾದ ಏಳು ಮಂದಿಯನ್ನು ಕುವೈತ್‌ನಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ ಎಂದು ಸರಕಾರಿ ವಾರ್ತಾ ಸಂಸ್ಥೆ ಕೆಯುಎನ್‌ಎ ವರದಿ ಮಾಡಿದೆ.

ಗಲ್ಲಿಗೇರಿದವರಲ್ಲಿ ಇಬ್ಬರು ಕುವೈತಿಗಳು, ಇಬ್ಬರು ಈಜಿಪ್ಟಿಯನ್ನರು ಹಾಗೂ ಬಾಂಗ್ಲಾದೇಶ, ಫಿಲಿಪ್ಪೀನ್ಸ್ ಮತ್ತು ಇಥಿಯೋಪಿಯ ದೇಶಗಳ ತಲಾ ಒಬ್ಬರು ಸೇರಿದ್ದಾರೆ.

ತನ್ನ ಸೋದರಳಿಯ ಶೇಖ್ ಬಾಸಿಲ್ ಸಲೀಮ್ ಸಬಾಹ್ ಅಲ್ ಸಲೀಮ್ ಅಲ್ ಸಬಾಹ್ ಅವರನ್ನು ಕೊಲೆಗೈದ ಪ್ರಕರಣದಲ್ಲಿ ಕ್ರಿಮಿನಲ್ ನ್ಯಾಯಾಲಯವೊಂದು ರಾಜಕುಮಾರ ಶೇಖ್ ಫೈಸಲ್‌ರಿಗೆ 2011ರ ಅಕ್ಟೋಬರ್‌ನಲ್ಲಿ ಮರಣ ದಂಡನೆ ವಿಧಿಸಿತ್ತು.

ಅಪರಾಧಿ ಶೇಖ್ ಫೈಸಲ್ ಕೊಲೆಗೀಡಾದ ರಾಜಕುಮಾರನ ಮಾವನಾಗಿದ್ದಾನೆ ಹಾಗೂ ಅವರಿಗಿಂತ 20 ವರ್ಷ ಚಿಕ್ಕವನಾಗಿದ್ದಾನೆ. ಆತನು ಸೇನಾ ಗುಪ್ತಚರ ವಿಭಾಗದಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

2010ರ ಜೂನ್ ತಿಂಗಳಲ್ಲಿ ಸಭೆಯೊಂದು ನಡೆಯುತ್ತಿದ್ದಾಗ, ಅಪರಾಧಿ ಶೇಖ್ ಫೈಸಲ್ ತನ್ನ ಸೋದರಳಿಯ ಶೇಖ್ ಬಾಸಿಲ್‌ರ ಸಮೀಪ ಬಂದು ತನ್ನನ್ನು ಖಾಸಗಿಯಾಗಿ ಭೇಟಿಯಾಗುವಂತೆ ತಿಳಿಸಿದನು ಎನ್ನಲಾಗಿದೆ. ಅವರಿಬ್ಬರೂ ಸಭೆಯಿಂದ ಹೊರನಡೆದರು. ಸ್ವಲ್ಪವೇ ಹೊತ್ತಿನ ಬಳಿಕ ಗುಂಡು ಹಾರಾಟದ ಸದ್ದು ಕೇಳಿಸಿತು.

ಗಾಲಿ ಕುರ್ಚಿಯಲ್ಲಿ ಸಾಗುತ್ತಿದ್ದ ರಾಜಕುಮಾರ ಕೈತೊಳೆಯುತ್ತಿರುವಾಗ ಅವರ ಮೇಲೆ ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆರೋಪಿ ರಾಜಕುಮಾರನು ತನ್ನ ಸೇನಾ ಪಿಸ್ತೂಲಿನಿಂದ ತನ್ನ ಸೋದರಳಿಯನಿಗೆ ಗುಂಡು ಹಾರಿಸಿದನು ಎಂದು ಮೂಲಗಳು ಹೇಳಿವೆ.

 ಕೊಲೆಯಾದ ರಾಜಕುಮಾರ ಬಾಸಿಲ್ ಪ್ರಚಾರವನ್ನು ಬಯಸದ ಉದಾರಿ ಹಾಗೂ ನಿಸ್ವಾರ್ಥಿಯಾಗಿದ್ದರು ಎಂದು ವರದಿಗಳು ಹೇಳಿವೆ. ಅವರು ಕುವೈತ್‌ನ 12ನೆ ಅಮೀರ್ ಶೇಖ್ ಸಬಾಹ್ ಅಲ್ ಸಲೀಮ್ ಅಲ್ ಸಬಾಹ್ ಅವರ ಮೊಮ್ಮಗನಾಗಿದ್ದರು.

ಕುವೈತ್‌ನಲ್ಲಿ 2013 ಮಧ್ಯ ಭಾಗದ ಬಳಿಕ ಮೊದಲ ಬಾರಿಗೆ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News